November 11, 2026
Wednesday, November 11, 2026
spot_img

ರೇಷನ್ ಕಾರ್ಡ್‌ದಾರರೇ ಗಮನಿಸಿ: ಇ-ಕೆವೈಸಿ ಗಡುವು ನ. 30ರವರೆಗೆ ವಿಸ್ತರಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ರಾಜ್ಯದ ಪಡಿತರ ಚೀಟಿದಾರರಿಗೆ ಸರ್ಕಾರ ಮಹತ್ವದ ಸುದ್ದಿಯೊಂದನ್ನು ನೀಡಿದೆ. ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಲು ನೀಡಲಾಗಿದ್ದ ಗಡುವನ್ನು ನವೆಂಬರ್ 30ರವರೆಗೆ ವಿಸ್ತರಿಸಲಾಗಿದೆ. ಇನ್ನೂ ಲಕ್ಷಾಂತರ ಫಲಾನುಭವಿಗಳು ಇ-ಕೆವೈಸಿ ಮಾಡಿಸಿಕೊಳ್ಳುವುದು ಬಾಕಿ ಇರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಆದರೆ ನಿಗದಿತ ದಿನಾಂಕದ ನಂತರ ಮತ್ತೊಮ್ಮೆ ಕಾಲಾವಕಾಶ ನೀಡುವುದಿಲ್ಲ ಎಂದು ಆಹಾರ ಇಲಾಖೆ ಸ್ಪಷ್ಟಪಡಿಸಿದೆ.

39 ಲಕ್ಷ ಫಲಾನುಭವಿಗಳಿಂದ ಇ-ಕೆವೈಸಿ ಬಾಕಿ

ರಾಜ್ಯದಲ್ಲಿ ಒಟ್ಟು 2.67 ಕೋಟಿ ಫಲಾನುಭವಿಗಳಿದ್ದು, ಇವರಲ್ಲಿ ಸುಮಾರು 2.27 ಕೋಟಿ ಮಂದಿ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ. ಇನ್ನು ಸುಮಾರು 39 ಲಕ್ಷ ಫಲಾನುಭವಿಗಳು ಈ ಪ್ರಕ್ರಿಯೆ ಮುಗಿಸಬೇಕಿದೆ. ಈ ಹಿಂದೆ ನವೆಂಬರ್ 10 ಕೊನೆಯ ದಿನವಾಗಿತ್ತು. ಇದೀಗ ಅದನ್ನು ತಿಂಗಳ ಅಂತ್ಯದವರೆಗೆ ವಿಸ್ತರಿಸಲಾಗಿದೆ.

ಮನೆಯಲ್ಲೇ ಕುಳಿತು ಇ-ಕೆವೈಸಿ ಮಾಡಬಹುದು

ಪಡಿತರದಾರರು ಇ-ಕೆವೈಸಿ ಮಾಡಿಸಲು ಹತ್ತಿರದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಬಹುದು. ಇಲ್ಲವೇ ಆಹಾರ ಇಲಾಖೆಯ ಅಧಿಕೃತ ‘ಅನ್ನಸೇವೆ’ ಮೊಬೈಲ್ ಆ್ಯಪ್ ಮೂಲಕ ಮನೆಯಲ್ಲೇ ಪ್ರಕ್ರಿಯೆ ಪೂರ್ಣಗೊಳಿಸುವ ಅವಕಾಶವಿದೆ.

ಇದನ್ನೂ ಓದಿ:

ಇ-ಕೆವೈಸಿ ಮಾಡೋದು ಹೇಗೆ?

ಮೊದಲು ಗೂಗಲ್ ಪ್ಲೇ ಸ್ಟೋರ್‌ನಿಂದ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ‘ಸ್ವಯಂ ನಾಗರಿಕ’ ಆಯ್ಕೆ ಮಾಡಬೇಕು.

ಬಳಿಕ ರೇಷನ್ ಕಾರ್ಡ್ ಸಂಖ್ಯೆ ಮತ್ತು ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ ನಮೂದಿಸಬೇಕು.

ನಂತರ ಯುಐಡಿಎಐ ಮುಖ ದೃಢೀಕರಣ ವ್ಯವಸ್ಥೆಯ ಮೂಲಕ ಮುಖ ಸ್ಕ್ಯಾನ್ ಮಾಡಿ ಪ್ರಕ್ರಿಯೆ ಮುಗಿಸಬಹುದು.

ರೇಷನ್ ಕಾರ್ಡ್‌ನಲ್ಲಿರುವ ಪ್ರತಿಯೊಬ್ಬ ಸದಸ್ಯರೂ ಪ್ರತ್ಯೇಕವಾಗಿ ಇ-ಕೆವೈಸಿ ಮಾಡಿಸಬೇಕು.

ಗಡುವು ಮೀರಿದರೆ ಪಡಿತರಕ್ಕೆ ತೊಂದರೆ?

ನವೆಂಬರ್ 30ರೊಳಗೆ ಇ-ಕೆವೈಸಿ ಪೂರ್ಣಗೊಳಿಸದಿದ್ದರೆ ಪಡಿತರ ವಿತರಣೆಗೆ ತೊಂದರೆಯಾಗುವ ಅಥವಾ ಕಾರ್ಡ್ ರದ್ದಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

Must Read

Skip to toolbar