ಹೊಪಸದಿಗಂತ ವರದಿ ಮಂಡ್ಯ:
ಮಂಡ್ಯ : ಜಿಲ್ಲಾ ಕಾರಾಗೃಹದ ಮೇಲೆ ಎಸ್ಪಿ ನೇತೃತ್ವದ ಪೊಲೀಸ್ ಅಧಿಕಾರಿಗಳು ಧಾಳಿ ನಡೆಸಿ ಗಾಂಜಾ, ತಂಬಾಕು, ಪೆನ್‌ಡ್ರೈವ್ ಕ್ಯಾಮೆರಾ, 31800 ರೂ. ನಗದು ಹಣವನ್ನು ವಶಪಡಿಸಿಕೊಂಡಿರುವ ಘಟನೆ ಮಂಗಳವಾರ ಸಂಜೆ ನಡೆದಿದೆ.
ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ. ವಿ.ಜೆ. ಶೋಭರಾಣಿ ಅವರ ನೇತೃತ್ವದ 109 ಮಂದಿ ಅಧಿಕಾರಿ ಸಿಬ್ಬಂದಿಗಳ ತಂಡ ಕಾರಾಗೃಹದ ಮೇಲೆ ದಾಳಿ ನಡೆಸಿ ಅಕ್ರಮವಾಗಿ ಇಟ್ಟುಕೊಂಡಿದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಜೈಲಿನಲ್ಲಿರುವ ಪ್ರತಿ ಕೊಠಡಿಯಲ್ಲೂ ಪೊಲೀಸ್ ಸಿಬ್ಬಂದಿಗಳು ತಪಾಸಣೆ ನಡೆಸಿದ್ದಾರೆ. ಅಲ್ಲಿ ನಮಗೆ ಗಾಂಜಾ, ಸಿಗರೇಟು, ಬೀಡಿ, ತಂಬಾಕು, ಕತ್ತರಿ ಹಾಗೂ ನಗದು ಹಣ, ಒಂದು ಪೆನ್ ಕ್ಯಾಮೆರಾ, ವೋಡೋ ಫೋನ್ ಕಂಪನಿಯ ಒಂದು ಸಿಮ್ ಸಹ ಸಿಕ್ಕಿದ್ದು, ಎಲ್ಲವನ್ನೂ ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ. ವಿ.ಜೆ. ಶೋಭರಾಣಿ ತಿಳಿಸಿದರು.
ಜೈಲಿನಲ್ಲಿರುವ ಯಾವ ಕೊಠಡಿಯಲ್ಲಿ ಏನೆಲ್ಲಾ ವಸ್ತುಗಳು ಸಿಕ್ಕಿವೆ ಎಂಬುದರ ಬಗ್ಗೆ ಈಗಾಗಲೇ ನೋಟ್ ಮಾಡಿಕೊಂಡಿದ್ದೇವೆ. ಅಲ್ಲಿ ಯಾರ್ಯಾರು ಇದ್ದಾರೆ ಎಂಬ ಬಗ್ಗೆಯೂ ತಿಳಿದಿದೆ. ಎಲ್ಲವನ್ನೂ ಕೂಲಂಕುಶವಾಗಿ ತನಿಖೆ ನಡೆಸಿ ಮೇಲಧಿಕಾರಿಗಳಿಗೆ ವರದಿ ನೀಡುವುದಾಗಿ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಜೈಲಿನ ಅಧಿಕಾರಿಗಳು ಸಹ ಆಗಾಗ್ಗೆ ತಪಾಸಣೆ ನಡೆಸುತ್ತಾರೆ. ಅದರೂ ಇವುಗಳು ಒಳಗೆ ಬರುತ್ತವೆ. ಇದರ ಬಗ್ಗೆಯೂ ನಮ್ಮ ಅಧಿಕಾರಿಗಳು ತನಿಖೆ ನಡೆಸುತ್ತಾರೆ ಎಂದು ತಿಳಿಸಿದರು.
ಮಂಡ್ಯ ಉಪ ವಿಭಾಗದ ಡಿವೈಎಸ್ಪಿ ಲಕ್ಷ್ಮಿನಾರಾಯಣ್, ಜಿಲ್ಲಾ ಸಶಸ್ತ್ರ ಪೊಲೀಸ್ ಪಡೆಯ ಡಿವೈಎಸ್ಪಿ ಸತೀಶ್, ಸೆನ್ ವಿಭಾಗದ ಡಿವೈಎಸ್ಪಿ ಶಿವಮೂರ್ತಿ, ಗ್ರಾಮಾಂತರ ಠಾಣೆ ಇನ್ಸ್‌ಪೆಕ್ಟರ್ ಪ್ರಕಾಶ್ ಸೇರಿದಂತೆ 6 ಮಂದಿ ಇನ್ಸ್‌ಪೆಕ್ಟರ್‌ಗಳು, 9 ಮಂದಿ ಪಿಎಸ್‌ಐಗಳು, 9 ಮಂದಿ ಪ್ರಬಾರ ಪಿಎಸ್‌ಐಗಳು ಸೇರಿದಂತೆ 109 ಮಂದಿ ಪೊಲೀಸ್ ಸಿಬ್ಬಂದಿಗಳು ದಾಳಿಯಲ್ಲಿ ಪಾಲ್ಗೊಂಡಿದ್ದರು ಎಂದು ಅವರು ಹೇಳಿದರು.



