ಹೊಸದಿಗಂತ ವರದಿ ಹಾಸನ:
ಚಲಿಸುತ್ತಿದ್ದ ರೈಲಿನಲ್ಲಿ ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿದ್ದು ಆಯುರ್ವೇದ ವೈದ್ಯರು ಹೆರಿಗೆ ಮಾಡಿಸಿದ ಅಪರೂಪದ ಘಟನೆ ಹಾಸನದಲ್ಲಿ ನಡೆದಿದೆ.
ಚಲಿಸುತ್ತಿದ್ದ ರೈಲಿನಲ್ಲಿ ಮಹಿಳೆಯೊಬ್ಬರು ನೋವಿನಿಂದ ಒದ್ದಾಡಿದ್ದಾರೆ. ಈ ವೇಳೆ ಹಾಸನದಿಂದ ವಾರಣಾಸಿಗೆ ತೆರಳುತ್ತಿದ್ದ ಮೂವರು ಆಯುರ್ವೇದ ವೈದ್ಯರು ಯಶಸ್ವಿಯಾಗಿ ಹೆರಿಗೆ ಮಾಡಿಸಿದ್ದಾರೆ. ಹಾಸನದ ಶ್ರೀ ಧರ್ಮಸ್ಥಳ ಆಯುರ್ವೇದ ಕಾಲೇಜಿನ ಮೂವರು ವೈದ್ಯರಾದ ಡಾ. ರಶ್ಮಿ ಬಿಳಗಿ, ಡಾ. ಲತಾಶ್ರೀ.ಎನ್. ಹಾಗೂ ಡಾ. ಶಾಹಿನ್.ಎಂ. ಗರ್ಭಿಣಿಯ ಆರೋಗ್ಯ ಸ್ಥಿತಿ ಗಮನಿಸಿ, ಸಮಯ ಮೀರುವ ಮುನ್ನ ಹೆರಿಗೆ ಮಾಡಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ರೈಲಿನ ಬೋಗಿಯಲ್ಲಿ ಗರ್ಭಿಣಿಗೆ ಹೆರಿಗೆ ನೋವು ಆರಂಭವಾಗಿರುವ ಸುದ್ದಿ ಹರಡಿತ್ತು. ಬೇರೆ ಬೋಗಿಯಲ್ಲಿದ್ದ ಮೂವರು ವೈದ್ಯರು ತಕ್ಷಣವೇ ಓಡಿಬಂದು ಆರೋಗ್ಯ ಗಮನಿಸಿದ್ದಾರೆ. ಹೆರಿಗೆಗೆ ಸಮಯವಿಲ್ಲ, ಆಸ್ಪತ್ರೆ ಬರುವವರೆಗೂ ಕಾದರೆ ತಾಯಿ ಹಾಗೂ ಮಗುವಿನ ಜೀವಕ್ಕೆ ಕಂಟಕ ಎಂದು ನಿರ್ಧರಿಸಿ ರೈಲಿನಲ್ಲಿಯೇ ಹೆರಿಗೆ ಮಾಡಿ ಮುಗಿಸಿದ್ದಾರೆ. ಈ ವೇಳೆ ಕರುಳಬಳ್ಳಿ ಮಗುವಿನ ಕುತ್ತಿಗೆಗೆ ಸುತ್ತಿಕೊಂಡು ಕೆಲ ಕಾಲ ಆತಂಕವಾಗಿದೆ. ತದನಂತರ ಬಳ್ಳಿಯನ್ನು ಬಿಡಿಸಿ ಮಗುವನ್ನು ಯಶಸ್ವಿಯಾಗಿ ಹೊರಕ್ಕೆ ತಂದಿದ್ದಾರೆ. ಮಗು ಹಾಗೂ ತಾಯಿಯ ಆರೋಗ್ಯ ಚೆನ್ನಾಗಿದೆ.



