July 8, 2026
Wednesday, July 8, 2026
spot_img

ಈಜಿಪ್ಟ್ ಮಣಿಸಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟ ಅರ್ಜೆಂಟೀನಾ: ಮೆಸ್ಸಿ ಹೆಸರಿಗೆ ಜಾಗತಿಕ ದಾಖಲೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಫುಟ್‌ಬಾಲ್ ಸಾಮ್ರಾಜ್ಯದ ಸುಲ್ತಾನ್ ಲಿಯೋನೆಲ್ ಮೆಸ್ಸಿ ಅಂತಾರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ ಮತ್ತೊಂದು ಐತಿಹಾಸಿಕ ಜಾಗತಿಕ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಕಠಿಣ ಸವಾಲು ಒಡ್ಡಿದ್ದ ಈಜಿಪ್ಟ್ ವಿರುದ್ಧದ ಪಂದ್ಯದಲ್ಲಿ ಅರ್ಜೆಂಟೀನಾ ತಂಡವನ್ನು ಗೆಲುವಿನ ದಡ ಸೇರಿಸುವ ಮೂಲಕ ಮೆಸ್ಸಿ ತಾನ್ಯಾಕೆ ವಿಶ್ವದ ಶ್ರೇಷ್ಠ ಆಟಗಾರ ಎಂಬುದನ್ನು ಸಾಬೀತುಪಡಿಸಿದ್ದಾರೆ.

ಮೆಸ್ಸಿ ಹೆಸರಿಗೆ ಅಪರೂಪದ ವಿಶ್ವದಾಖಲೆ

ಈ ರೋಮಾಂಚಕ ಪಂದ್ಯದಲ್ಲಿ ಆಕರ್ಷಕ ಗೋಲು ಗಳಿಸಿದ ಮೆಸ್ಸಿ, ಫಿಫಾ ವಿಶ್ವಕಪ್ ಇತಿಹಾಸದ ಸತತ ಆರು ನಾಕೌಟ್‌ ಪಂದ್ಯಗಳಲ್ಲಿ ಗೋಲು ಬಾರಿಸಿದ ವಿಶ್ವದ ಮೊದಲ ಮತ್ತು ಏಕೈಕ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆರಂಭದಲ್ಲಿ ಪೆನಾಲ್ಟಿ ಕಿಕ್ ಕೈತಪ್ಪಿದರೂ ಧೃತಿಗೆಡದ ಲಿಯೋನೆಲ್, ದ್ವಿತೀಯಾರ್ಧದ 83ನೇ ನಿಮಿಷದಲ್ಲಿ ಅದ್ಭುತ ಗೋಲು ಹೊಡೆದು ತಂಡದ ಮುನ್ನಡೆಗೆ ಕಾರಣರಾದರು.

ಕೊನೆ ಕ್ಷಣದವರೆಗೂ ತೀವ್ರ ಕುತೂಹಲ

ಪಂದ್ಯದ 67ನೇ ನಿಮಿಷದವರೆಗೂ ಈಜಿಪ್ಟ್ ತಂಡ 2-0 ಗೋಲುಗಳ ಅಂತರದಿಂದ ಮುನ್ನಡೆ ಸಾಧಿಸಿ ಅರ್ಜೆಂಟೀನಾಗೆ ಶಾಕ್ ನೀಡಿತ್ತು. ಆದರೆ ಕೇವಲ 13 ನಿಮಿಷಗಳ ಅಂತರದಲ್ಲಿ ಪಂದ್ಯದ ಚಿತ್ರಣವೇ ಬದಲಾಯಿತು. ರೊಮೆರೊ (79′), ಮೆಸ್ಸಿ (83′) ಹಾಗೂ ಎಂಜೊ ಫೆರ್ನಾಂಡಿಸ್ (90′) ಬ್ಯಾಕ್-ಟು-ಬ್ಯಾಕ್ ಗೋಲು ಸಿಡಿಸಿ ತಂಡಕ್ಕೆ 3-2 ರ ರೋಚಕ ಗೆಲುವು ತಂದುಕೊಟ್ಟರು. ಈ ಮೂಲಕ ಅರ್ಜೆಂಟೀನಾ ಹೆಮ್ಮೆಯಿಂದ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದೆ.

ಕೂದಲೆಳೆಯ ಅಂತರದಲ್ಲಿ ಟೂರ್ನಿಯಿಂದ ಹೊರಬೀಳುವ ಆತಂಕದಲ್ಲಿದ್ದ ಅರ್ಜೆಂಟೀನಾವನ್ನು ಮೆಸ್ಸಿ ತಮ್ಮ ಮ್ಯಾಜಿಕಲ್ ಆಟದ ಮೂಲಕ ರಕ್ಷಿಸಿ, ಇತಿಹಾಸ ಬರೆದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !