ಹೊಸದಿಗಂತ, ಬೆಳಗಾವಿ:
ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ವತಿಯಿಂದ ಜುಲೈ 10, 11 ಹಾಗೂ 12ರಂದು ಬೆಳಗಾವಿ ಜಿಲ್ಲೆಯಲ್ಲಿ ಆಯೋಜಿಸಲು ಉದ್ದೇಶಿಸಿರುವ ವಿವಿಧ ಕಾರ್ಯಕ್ರಮಗಳು, ರ‍್ಯಾಲಿ ಮತ್ತು ಪಥಸಂಚಲನಗಳಿಗೆ ಅನುಮತಿ ನೀಡದಂತೆ ಭೀಮ್ ಆರ್ಮಿ (ಭಾರತ್ ಏಕತಾ ಮಿಷನ್) ಬೆಳಗಾವಿ ಜಿಲ್ಲಾ ಘಟಕವು ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದೆ.
ಸಂಘಟನೆಯ ಮನವಿಯಲ್ಲಿ, ಭಾರತದ ಸಂವಿಧಾನವು ಸಮಾನತೆ, ಸಹೋದರತೆ ಹಾಗೂ ಧರ್ಮನಿರಪೇಕ್ಷತೆಯ ಮೌಲ್ಯಗಳನ್ನು ಪ್ರತಿಪಾದಿಸುತ್ತಿದ್ದು, ರಾಜ್ಯದಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆ ಮತ್ತು ಸಾಮಾಜಿಕ ಸೌಹಾರ್ದತೆ ಕಾಪಾಡುವುದು ಸರ್ಕಾರದ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಉಲ್ಲೇಖಿಸಲಾಗಿದೆ.
ಜುಲೈ 10ರಿಂದ 12ರವರೆಗೆ ನಡೆಯಲಿರುವ ಕಾರ್ಯಕ್ರಮಗಳ ಕುರಿತು ಸಮಗ್ರ ಪರಿಶೀಲನೆ ನಡೆಸಿ, ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆ ಕಂಡುಬಂದಲ್ಲಿ, ಕಾನೂನುಬದ್ಧವಾಗಿ ಅನುಮತಿ ನಿರಾಕರಿಸುವುದು ಅಥವಾ ಅಗತ್ಯ ನಿರ್ಬಂಧ ಹೇರಬೇಕೆಂದು ಸಂಘಟನೆ ಆಗ್ರಹಿಸಿದೆ. ಇದೇ ವೇಳೆ, ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ಸೇವಾ ನಿಯಮಗಳನ್ನು ಪಾಲಿಸುವಂತೆ ಸರ್ಕಾರ ಸೂಕ್ತ ನಿರ್ದೇಶನ ನೀಡಬೇಕು. ಸೇವಾ ನಿಯಮ ಉಲ್ಲಂಘನೆಯ ಪ್ರಕರಣಗಳು ಕಂಡುಬಂದರೆ ನಿಯಮಾನುಸಾರ ಕ್ರಮ ಕೈಗೊಳ್ಳಬೇಕೆಂದೂ ಮನವಿಯಲ್ಲಿ ತಿಳಿಸಲಾಗಿದೆ. ಕಾರ್ಯಕ್ರಮಗಳ ವೇಳೆ ಯಾವುದೇ ರೀತಿಯ ದ್ವೇಷ ಭಾಷಣ, ಪ್ರಚೋದನಾತ್ಮಕ ಹೇಳಿಕೆ ಅಥವಾ ಕಾನೂನುಬಾಹಿರ ಚಟುವಟಿಕೆಗಳು ನಡೆದರೆ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಭೀಮ್ ಆರ್ಮಿ ಒತ್ತಾಯಿಸಿದೆ. ಅಲ್ಲದೆ, ಆರ್‌ಎಸ್‌ಎಸ್ ಸಂಘಟನೆಯ ಚಟುವಟಿಕೆಗಳ ಕುರಿತು ಸಂಬಂಧಿತ ಕಾನೂನುಗಳಡಿ ಪರಿಶೀಲನೆ ನಡೆಸುವಂತೆ ಸರ್ಕಾರವನ್ನು ಮನವಿಯಲ್ಲಿ ಕೋರಲಾಗಿದೆ. ಈ ಸಂಬಂಧ ಕಾನೂನುಬದ್ಧ ಆಧಾರಗಳಿದ್ದರೆ ಮುಂದಿನ ಕ್ರಮಗಳನ್ನು ಸರ್ಕಾರ ಪರಿಗಣಿಸಬೇಕು ಎಂಬ ಅಭಿಪ್ರಾಯವನ್ನೂ ಸಂಘಟನೆ ವ್ಯಕ್ತಪಡಿಸಿದೆ.
ಇದನ್ನೂ ಓದಿ:
ಬೆಳಗಾವಿ ಜಿಲ್ಲೆ ಮತ್ತು ರಾಜ್ಯದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಈ ಮನವಿ ಸಲ್ಲಿಸಲಾಗಿದೆ ಎಂದು ಭೀಮ್ ಆರ್ಮಿ ಬೆಳಗಾವಿ ಜಿಲ್ಲಾ ಘಟಕದ ಪದಾಧಿಕಾರಿಗಳು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಭೀಮ್ ಆರ್ಮಿಯ ಪ್ರಮುಖ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.



