ಹೊಸದಿಗಂತ ಡಿಜಿಟಲ್ ಡೆಸ್ಕ್:
ನಗರದ ಶ್ವಾನ ಪ್ರಿಯರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಬೆಂಗಳೂರು ಪೂರ್ವ ನಗರ ಪಾಲಿಕೆ ವತಿಯಿಂದ ಮಹತ್ವದ ಸುದ್ದಿಯೊಂದನ್ನು ನೀಡಲಾಗಿದೆ. ಅನಾಥ ಹಾಗೂ ಸಂಕಷ್ಟಕ್ಕೆ ಸಿಲುಕಿದ್ದ ಮೂಕ ಜೀವಿಗಳಿಗೆ ಆಸರೆಯಾಗಲು ಜುಲೈ 18ರ ಶನಿವಾರದಂದು ವಿಶೇಷ ‘ಸೆಕೆಂಡ್ ಇನ್ನಿಂಗ್ಸ್’ ನಾಯಿಗಳ ದತ್ತು ಸ್ವೀಕಾರ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಜುಲೈ 18 ಶನಿವಾರದಂದು ಮಧ್ಯಾಹ್ನ 3:00 ಗಂಟೆಗೆ ಬೆಂಗಳೂರಿನ ವೈಟ್‌ಫೀಲ್ಡ್ ಬಲಿಯ ನೆಕ್ಸಸ್ ಶಾಂತಿನಿಕೇತನ ಮಾಲ್‌ನಲ್ಲಿ ಈ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಯಾವ ಶ್ವಾನಗಳನ್ನು ದತ್ತು ಪಡೆಯಬಹುದು?
ಅಪಘಾತ ಅಥವಾ ಮಾನವರ ಕ್ರೌರ್ಯಕ್ಕೆ ಬಲಿಯಾಗಿದ್ದ, ತಾಯಿ ಇಲ್ಲದೆ ಅನಾಥವಾಗಿದ್ದ ನಾಯಿಗಳನ್ನು ಜಿಬಿಎ ರಕ್ಷಿಸಿತ್ತು. ಸದ್ಯ ವೈದ್ಯಕೀಯ ಆರೈಕೆ ಮತ್ತು ಸೂಕ್ತ ಚಿಕಿತ್ಸೆಯಿಂದ ಸಂಪೂರ್ಣವಾಗಿ ಗುಣಮುಖವಾಗಿರುವ, ಆರೋಗ್ಯವಂತ ದೇಸಿ ತಳಿ ನಾಯಿಗಳನ್ನು ಸಾರ್ವಜನಿಕರು ದತ್ತು ಪಡೆಯಲು ಮುಕ್ತ ಅವಕಾಶ ಕಲ್ಪಿಸಲಾಗಿದೆ.
ನಟ ಮಾಸ್ಟರ್ ಆನಂದ್ ವಿಶೇಷ ಮನವಿ:
ಶಾಶ್ವತ ಪ್ರೀತಿಯ ಮನೆಯ ನಿರೀಕ್ಷೆಯಲ್ಲಿರುವ ಈ ಸ್ಥಳೀಯ ಶ್ವಾನಗಳನ್ನು ದತ್ತು ಪಡೆದು ಅವುಗಳ ಬದುಕಿಗೆ ಹೊಸ ಭರವಸೆ ಮತ್ತು ಪ್ರೀತಿಯ ನೆಲೆ ನೀಡುವಂತೆ ಖ್ಯಾತ ಕನ್ನಡ ನಟ ಮಾಸ್ಟರ್ ಆನಂದ್ ಅವರು ಶ್ವಾನ ಪ್ರಿಯರಿಗೆ ಕರೆ ನೀಡಿದ್ದಾರೆ.
ಇದನ್ನೂ ಓದಿ:
ನಾಯಿಗಳ ಮಾಹಿತಿ ತಿಳಿಯೋದು ಹೇಗೆ?
ದತ್ತು ಸ್ವೀಕಾರಕ್ಕೆ ಲಭ್ಯವಿರುವ ಆರೋಗ್ಯವಂತ ದೇಸಿ ನಾಯಿಗಳ ಫೋಟೋ ಹಾಗೂ ಸಂಪೂರ್ಣ ವಿವರಗಳನ್ನು ಸಾರ್ವಜನಿಕರು https://drive.google.com/drive/folders/1qljNy3UQAv4Zi32cQ7DN1proDf-ZUDha ಈ ಅಧಿಕೃತ ಗೂಗಲ್ ಡ್ರೈವ್ ಲಿಂಕ್‌ಗೆ ಭೇಟಿ ನೀಡಿ ಮುಂಚಿತವಾಗಿಯೇ ಪರಿಶೀಲಿಸಬಹುದಾಗಿದೆ.
ಮೂಕ ಜೀವಿಗಳಿಗೆ ಹೊಸ ಜೀವನ ನೀಡುವ ಈ ಪುಣ್ಯದ ಜಾಗೃತಿ ಅಭಿಯಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸಾರ್ವಜನಿಕರಲ್ಲಿ ವಿನಂತಿಸಿದೆ.



