ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ–ಮಹಾರಾಷ್ಟ್ರ ಗಡಿ ವಿವಾದ ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ನೇತೃತ್ವದಲ್ಲಿ ಮುಂಬೈ ರಾಜಭವನದಲ್ಲಿ ನಡೆದ ಗಡಿ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಪ್ರಕರಣದ ಮುಂದಿನ ಕಾನೂನು ಹೋರಾಟ ಮತ್ತು ಗಡಿಭಾಗದ ವಿಚಾರಗಳ ಕುರಿತು ಮಹತ್ವದ ಚರ್ಚೆ ನಡೆದಿದೆ.
ಸುಪ್ರೀಂ ಕೋರ್ಟ್ ಹೋರಾಟಕ್ಕೆ ಒತ್ತು
ಸಭೆಯಲ್ಲಿ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯಲಿರುವ ವಿಚಾರಣೆಗೆ ಪರಿಣಾಮಕಾರಿ ರೀತಿಯಲ್ಲಿ ಸಿದ್ಧತೆ ನಡೆಸಲು ಹಾಗೂ ಕಾನೂನು ಹೋರಾಟವನ್ನು ಮತ್ತಷ್ಟು ಬಲಪಡಿಸುವ ಕುರಿತು ಚರ್ಚಿಸಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ:
ಗಡಿಭಾಗದ ಯೋಜನೆಗಳ ಪರಿಶೀಲನೆ
ಗಡಿಭಾಗದ ಮರಾಠಿ ಭಾಷಿಕರಿಗೆ ಶಿಕ್ಷಣ, ಆರೋಗ್ಯ ಸೇರಿದಂತೆ ಈಗಾಗಲೇ ಜಾರಿಯಲ್ಲಿರುವ ವಿವಿಧ ಯೋಜನೆಗಳ ಪ್ರಗತಿಯನ್ನು ಪರಿಶೀಲಿಸಲಾಗಿದ್ದು, ಮುಂದೆಯೂ ಅಗತ್ಯ ಬೆಂಬಲ ಮುಂದುವರಿಸುವ ಬಗ್ಗೆ ಸಮಿತಿ ಅಭಿಪ್ರಾಯ ವ್ಯಕ್ತಪಡಿಸಿದೆ.
ಪ್ರಮುಖ ನಾಯಕರು ಸಭೆಯಲ್ಲಿ ಭಾಗಿ
ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಶರದ್ ಪವಾರ್, ಉಪಮುಖ್ಯಮಂತ್ರಿ ಏಕನಾಥ ಶಿಂಧೆ ಸೇರಿದಂತೆ ಹಲವು ಹಿರಿಯ ನಾಯಕರು ಹಾಗೂ ಗಡಿ ಉನ್ನತ ಮಟ್ಟದ ಸಮಿತಿ ಸದಸ್ಯರು ಭಾಗವಹಿಸಿದ್ದರು. ಗಡಿ ವಿಚಾರಕ್ಕೆ ಸಂಬಂಧಿಸಿದ ವಿವಿಧ ಆಯಾಮಗಳ ಕುರಿತು ಸಮಗ್ರ ಚರ್ಚೆ ನಡೆದಿರುವ ಮಾಹಿತಿ ಲಭ್ಯವಾಗಿದೆ.



