July 9, 2026
Thursday, July 9, 2026
spot_img

ಯಲ್ಲಾಪುರ ಹೆದ್ದಾರಿಯಲ್ಲಿ ಭೀಕರ ಅಪಘಾತ: ಮತ್ತೋರ್ವ ಚಿಕಿತ್ಸೆ ಫಲಿಸದೆ ಸಾ*ವು, ಮೃತರ ಸಂಖ್ಯೆ 7ಕ್ಕೆ ಏರಿಕೆ

ಹೊಸದಿಗಂತ ವರದಿ ಕಾರವಾರ

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಆರ್ತಿಬೈಲ್ ಬಳಿ ಕ್ರೂಸರ್ ವಾಹನ ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ಮುಖಾಮುಖಿ ಅಪಘಾತದಲ್ಲಿ ಮೃತರ ಸಂಖ್ಯೆ ಏಳಕ್ಕೇರಿದೆ.

ಗಂಭೀರವಾಗಿ ಗಾಯಗೊಂಡು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲ್ಪಟ್ಟ ಸಚಿನ್ ಎಂಬಾತ ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ.

ಆರ್ತಿಬೈಲ್ ಬಳಗಾರ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 52 ರಲ್ಲಿ ಗುರುವಾರ ನಸುಕಿನ ಜಾವ ಸಂಭವಿಸಿದ ಅಪಘಾತದಲ್ಲಿ ಕ್ರೂಸರ್ ಚಾಲಕ ಕುರಬಗಟ್ಟಿ ಧಾರವಾಡ ನಿವಾಸಿ ಸಂಜೀವ ಮೈಲಾರ ಅಂಗಡಿ(33) ಧಾರವಾಡ ಬೇಂದ್ರೆಭವನ ಕ್ರಾಸ್ ನಿವಾಸಿ ಅಕ್ಷಯ ತೇಜಪ್ಪಮುರಳವರ್(26) ಜಯನಗರ ನಿವಾಸಿ ಆಭಿಷೇಕ ಈಶ್ವರ್(28)ಸಪ್ತಾಪುರದ ಅಭಿಷೇಕ ಮಲ್ಲೇಷ ಮಡಬಾವಿ(27),ಜೆ.ಎಸ್ ಕ್ಯಾಂಪಸಿನ ಬಸಪ್ಪ ದೇವಪ್ಪ ಕನಕನವರ್(38) ಮುರಘಾಮಠ ನಿವಾಸಿ ಮಂಜುನಾಥ ಅಶೋಕ ಜಳಕಿ(33) ಎನ್ನುವವರು ಸ್ಥಳದಲ್ಲೇ ಮೃತಪಟ್ಟಿದ್ದರು.

ಗಂಭೀರ ಗಾಯಗೊಂಡಿರುವ ನರಗುಂದದ ಶಿವರಾಜ ಮಡಿವಾಳ(22)ಮೆಹಬೂಬ್ ನಗರದ ಸಚಿನ್(26) ಕಲಘಟಗಿಯ ಚೆನ್ನಬಸು ಸಂಪಗಾವಿಮಠ(28) ಅವರನ್ನು ಹುಬ್ಬಳ್ಳಿಯ ಕಿಮ್ಸ್ ಗೆ ಸಾಗಿಸಲಾಗಿತ್ತು ಇದೀಗ ಗಾಯಾಳು ಸಚಿನ್ ಮೃತ ಪಟ್ಟಿರುವುದರಿಂದ ಸಾವಿನ ಸಂಖ್ಯೆ ಏಳಕ್ಕೇರಿದೆ.

ಧಾರವಾಡದಿಂದ ಧರ್ಮಸ್ಥಳ, ಚಿಕ್ಕಮಗಳೂರು ಮೊದಲಾದ ಕಡೆ ಪ್ರವಾಸಕ್ಕೆಂದು ಕೆ.ಎ19 ಎಎ5920 ನೋಂದಣಿ ಸಂಖ್ಯೆಯ ಕ್ರೂಸರ್ ವಾಹನದಲ್ಲಿ ಹೊರಟ ಸಂದರ್ಭದಲ್ಲಿ ಕ್ರೂಸರ್ ವಾಹನ ಚಾಲಕ ಅತಿವೇಗ ಮತ್ತು ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿ ರಸ್ತೆಯ ಬಲಬದಿಗೆ ಬಂದು ಅಂಕೋಲಾ ಕಡೆಯಿಂದ ಯಲ್ಲಾಪುರ ಕಡೆ ಸಾಗುತ್ತಿದ್ದ ಕೆ.ಎ22ಎಎ1008 ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.

ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ, ಜಿಲ್ಲಾ ಪೊಲೀಸ್ ವರಿಷ್ಠ ದೀಪನ್.ಎನ್.ಎಂ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಅವರು ಘಟನಾ ಸ್ಥಳ ಮತ್ತು ಆಸ್ಪತ್ರೆಗೆ ಭೇಟಿ ನೀಡಿ ಘಟನೆಯ ಕುರಿತಂತೆ ಮಾಹಿತಿ ಪಡೆದರು. ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !