ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸ್ಥಾಪನಾ ದಿನವನ್ನು ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಸಮಾಜಮುಖಿ ಕಾರ್ಯಕ್ರಮದ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು. ಮಾಜಿ ಸಚಿವ, ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ವಿ. ಸುನೀಲ್ ಕುಮಾರ್ ನೇತೃತ್ವದಲ್ಲಿ ವಿಕಾಸ ಸೇವಾ ಸಂಸ್ಥೆ ಆಯೋಜಿಸಿದ್ದ ‘ವಿಕಾಸ ಉದ್ಯೋಗ ಸೇತು’ ಬೃಹತ್ ಉದ್ಯೋಗ ಮೇಳದಲ್ಲಿ ನೂರಾರು ಯುವಕರು ಉದ್ಯೋಗಾವಕಾಶ ಪಡೆದು ಹೊಸ ಬದುಕಿನತ್ತ ಹೆಜ್ಜೆಯಿಟ್ಟರು.
ಕಾರ್ಕಳದ ‘ವಿಕಾಸ’ ಕಚೇರಿಯಲ್ಲಿ ಗುರುವಾರ ನಡೆದ ಈ ಉದ್ಯೋಗ ಮೇಳಕ್ಕೆ ಬೆಂಗಳೂರು, ಮಂಗಳೂರು, ಉಡುಪಿ ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ್ದ ೨೫ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಭಾಗವಹಿಸಿ ನೇರ ಸಂದರ್ಶನ ನಡೆಸಿದವು. ಬೆಳಿಗ್ಗೆಯಿಂದಲೇ ಉದ್ಯೋಗಾಕಾಂಕ್ಷಿಗಳಿಂದ ಕಾರ್ಯಕ್ರಮ ಸ್ಥಳ ಕಿಕ್ಕಿರಿದು ತುಂಬಿತ್ತು. ಕಾರ್ಯಕ್ರಮವನ್ನು ಬಿಜೆಪಿ ಹಿರಿಯ ಮುಖಂಡ ಬೋಳ ಪ್ರಭಾಕರ ಕಾಮತ್ ಉದ್ಘಾಟಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ವಿ. ಸುನೀಲ್ ಕುಮಾರ್, ಉದ್ಯೋಗ ನೀಡುವುದಷ್ಟೇ ಕಾರ್ಯಕ್ರಮದ ಉದ್ದೇಶವಲ್ಲ. ಯುವಕರಿಗೆ ನಿರಂತರ ಅವಕಾಶ ಕಲ್ಪಿಸುವ ವ್ಯವಸ್ಥೆ ರೂಪಿಸುವುದೇ ನಮ್ಮ ಗುರಿ. ವಿಕಾಸ ಉದ್ಯೋಗ ಸೇತು ಮುಂದಿನ ದಿನಗಳಲ್ಲಿಯೂ ನಿರಂತರವಾಗಿ ನಡೆಯಲಿದೆ ಎಂದು ತಿಳಿಸಿದರು. ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೂ ವಿಶೇಷ ಯೋಜನೆ ರೂಪಿಸಲಾಗಿದ್ದು, ‘ವಿಕಾಸ ಪರೀಕ್ಷಾ ಸೇತು’ ಕಾರ್ಯಕ್ರಮದ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ಹಾಗೂ ಮಾರ್ಗದರ್ಶನವನ್ನು ನಿರಂತರವಾಗಿ ನೀಡಲಾಗುವುದು ಎಂದು ಅವರು ಇದೇ ಸಂದರ್ಭ ಘೋಷಿಸಿದರು.
ಕಾರ್ಯಕ್ರಮದಲ್ಲಿ ಉದ್ಯಮಿ ಗಣೇಶ್ ಕಾಮತ್, ಮಣಿರಾಜ ಶೆಟ್ಟಿ, ರಾಜೇಶ್ವರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್, ಜಿಲ್ಲಾ ಉಪಾಧ್ಯಕ್ಷ ಮಹಾವೀರ ಹೆಗ್ಡೆ, ಫಾಕ್ಸ್ಕಾನ್ ಸಂಸ್ಥೆಯ ಪ್ರತಿನಿಧಿ ರಾಜೇಶ್ವರಿ, ಸ್ಪೆಕ್ಟಮ್ ಸೊಲ್ಯೂಷನ್ ಸಂಸ್ಥೆಯ ಮುಖ್ಯಸ್ಥ ದಿವಾಕರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಪ್ರಸಾದ್ ಸ್ವಾಗತಿಸಿ, ಕರುಣಾಕರ ಕೋಟ್ಯಾನ್ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.
ವಿಕಾಸ ಶಾಸಕರ ಕಚೇರಿ ಹಾಗೂ ರಾಮಮಂದಿರ ಆವರಣದಲ್ಲಿ ಏಕಕಾಲದಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5.30ರವರೆಗೆ ಸಂದರ್ಶನ ಪ್ರಕ್ರಿಯೆ ನಡೆಯಿತು. ಅಭ್ಯರ್ಥಿಗಳ ಅನುಕೂಲಕ್ಕಾಗಿ ವಿಶಾಲ ಸಭಾಂಗಣ, ಆಸನ ವ್ಯವಸ್ಥೆ, ಮಧ್ಯಾಹ್ನದ ಊಟ, ಚಹಾ-ತಿಂಡಿ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿತ್ತು.

1,600ಕ್ಕೂ ಹೆಚ್ಚು ನೋಂದಣಿ, 292 ಮಂದಿಗೆ ಸ್ಥಳದಲ್ಲೇ ಉದ್ಯೋಗ
ಉದ್ಯೋಗ ಮೇಳಕ್ಕೆ ಒಟ್ಟು 1,600ಕ್ಕೂ ಹೆಚ್ಚು ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಮೊದಲ ಹಂತದಲ್ಲಿ ಸುಮಾರು 600 ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಿದ್ದು, ಅವರಲ್ಲಿ 292 ಮಂದಿಗೆ ಸ್ಥಳದಲ್ಲೇ ನೇಮಕಾತಿ ಪತ್ರ ವಿತರಿಸಲಾಯಿತು. ಇದಲ್ಲದೆ, 208ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ವಿವಿಧ ಕಂಪನಿಗಳು ಶಾರ್ಟ್ಲಿಸ್ಟ್ ಮಾಡಿದ್ದು, ಎರಡನೇ ಹಂತದ ಸಂದರ್ಶನಕ್ಕಾಗಿ ಅವರನ್ನು ಮತ್ತೆ ಆಹ್ವಾನಿಸಲಾಗುತ್ತದೆ ಎಂದು ಆಯೋಜಕರು ತಿಳಿಸಿದ್ದಾರೆ.



