ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಹಲವು ಭಾಗಗಳಲ್ಲಿ ಮಳೆ ಸುರಿಯುತ್ತಿದ್ದು, ಇಂದು ರಾಜ್ಯದ ಎಂಟು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಪಶ್ಚಿಮ ಘಟ್ಟದ ಸಾಲುಗಳು ಹಾಗೂ ಕರಾವಳಿ ತೀರದ ಜಿಲ್ಲೆಗಳಿಗೆ ಮಾತ್ರ ಮಳೆಯಾಗುತ್ತಿದ್ದು, ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ 64.5 ಮಿ.ಮೀ ನಿಂದ 115.4 ಮಿ.ಮೀ ವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮುನ್ಸೂಚನೆ ನೀಡಿದೆ.
ಐಎಂಡಿ ದತ್ತಾಂಶಗಳ ಪ್ರಕಾರ, ಬೆಳಗಾವಿ, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಕೊಡಗು, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಹೆಚ್ಚಾಗಿರಲಿದೆ. ಈ ಭಾಗದ ನದಿ ತೀರದ ನಿವಾಸಿಗಳು ಮತ್ತು ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ನೈಸರ್ಗಿಕ ವಿಕೋಪ ಕೇಂದ್ರವು ಈಗಾಗಲೇ ಎಚ್ಚರಿಕೆ ಸಂದೇಶ ರವಾನಿಸಿದೆ.
ಮಳೆಯ ತೀವ್ರತೆಯ ಜೊತೆಗೆ ಕರಾವಳಿ ತೀರ ಭಾಗಗಳಲ್ಲಿ ಗಂಟೆಗೆ 40 ರಿಂದ 50 ಕಿಲೋಮೀಟರ್ ವೇಗದಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಮೀನುಗಾರರು ಜುಲೈ 10 ರಂದು ಸಮುದ್ರಕ್ಕೆ ಇಳಿಯದಂತೆ ಐಎಂಡಿ ಸೂಚನೆ ನೀಡಿದೆ.



