ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನದ ಆರ್ಥಿಕ ಸ್ಥಿತಿ ಕೆಟ್ಟದಾಗಿದೆ! ಹೌದು, ಸಾಲದ ಸುಳಿಯಲ್ಲಿ ಸಿಲುಕಿರುವ ಪಾಕಿಸ್ತಾನಕ್ಕೆ ಜಾಗತಿಕ ಹಣಕಾಸು ಸಂಸ್ಥೆಯಾದ ವಿಶ್ವಬ್ಯಾಂಕ್ ಈಗ 375.9 ಮಿಲಿಯನ್ ಡಾಲರ್ ಅಂದರೆ ಸುಮಾರು ಸುಮಾರು 3,100 ಕೋಟಿಗೂ ಅಧಿಕ ರೂಪಾಯಿಯ ತುರ್ತು ಆರ್ಥಿಕ ನೆರವನ್ನು ಅನುಮೋದಿಸಿದೆ.
ವಿಶ್ವಬ್ಯಾಂಕ್‌ನಿಂದ ಶತಕೋಟಿ ಡಾಲರ್ ಸಾಲ ಪಡೆಯುತ್ತಿದ್ದರೂ, ಪಾಕಿಸ್ತಾನದ ತಳಮಟ್ಟದ ವಾಸ್ತವ ಚಿತ್ರಣ ಅತ್ಯಂತ ಕರುಣಾಜನಕವಾಗಿದೆ. ಇಲ್ಲಿ ಬದುಕಲು ಬಿಡಿ, ಸಾಯೋದಕ್ಕೂ ಹಣವಿಲ್ಲ ಎನ್ನುವಂತಾಗಿದೆ. ಪಾಕ್ ಮಾಧ್ಯಮಗಳ ಪ್ರಕಾರ ಅಲ್ಲಿನ ಬಡ ಹಾಗೂ ಮಧ್ಯವರ್ಗದ ಜನರು ತುಂಬಾ ಕಷ್ಟದಲ್ಲಿದ್ದಾರೆ. ಮನೆಯಲ್ಲಿ ಯಾರಾದರೂ ಸತ್ತರೆ, ಅವರು ನಮ್ಮನ್ನು ಬಿಟ್ಟು ಹೋದರು ಎನ್ನುವ ದುಃಖ ಒಂದೆಡೆಯಾದರೆ ಅವರ ಅಂತ್ಯಕ್ರಿಯೆಗೆ ಹಣ ಹೊಂದಿಸುವ ದುಃಖ ಇನ್ನೊಂದು ಕಡೆ. ಸ್ನೇಹಿತರು, ಲೇವಾದೇವಿಗಾರರಿಂದ ಸಾಲ ಪಡೆದು ಅಂತ್ಯಕ್ರಿಯೆ ಮಾಡುವ ಕೆಟ್ಟ ಸ್ಥಿತಿ ಇದೆ.
ಪಾಕಿಸ್ತಾನವು ಈಗಾಗಲೇ ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ 7 ಬಿಲಿಯನ್ ಡಾಲರ್ ಬೇಲ್‌ಔಟ್ ಪ್ಯಾಕೇಜ್ ಪಡೆದಿದೆ. ಆ ಒಪ್ಪಂದದ ಭಾಗವಾಗಿ ಜನರ ಮೇಲೆ ಭಾರಿ ತೆರಿಗೆ ವಿಧಿಸಿರುವುದರಿಂದ ದೇಶದಲ್ಲಿ ಹಾಹಾಕಾರ ಎದ್ದಿದೆ.
ಪಾಕಿಸ್ತಾನವು ಚೀನಾ ಸೇರಿದಂತೆ ವಿವಿಧ ದೇಶಗಳಿಗೆ ಬಿಲಿಯನ್ ಗಟ್ಟಲೆ ಡಾಲರ್ ಸಾಲ ಬಾಕಿ ಉಳಿಸಿಕೊಂಡಿದೆ. ತನ್ನ ಹಳೆಯ ಸಾಲದ ಬಡ್ಡಿಯನ್ನು ತೀರಿಸಲು ಮತ್ತೊಂದು ಜಾಗತಿಕ ಸಂಸ್ಥೆಯಿಂದ ಹೊಸ ಸಾಲ ಪಡೆಯುವ ಸಾಲದ ಸುಳಿಯಲ್ಲಿ ದೇಶ ಸಂಪೂರ್ಣ ಸಿಲುಕಿದೆ.



