ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿ, ದೇಶವಿರೋಧಿ ಚಟುವಟಿಕೆ ಹಾಗೂ ವಿದೇಶಿ ಶಕ್ತಿಗಳ ಪ್ರಭಾವದ ಕುರಿತು ಬಹಿರಂಗ ಚರ್ಚೆಗೆ ಸವಾಲು ಹಾಕಿದ್ದಾರೆ.
ಈ ಹೇಳಿಕೆಗೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ತೀವ್ರ ಪ್ರತಿಕ್ರಿಯೆ ನೀಡಿದ್ದು, ಸಶಸ್ತ್ರ ಮಾವೋವಾದಿಗಳ ವಿರುದ್ಧದ ಕಾರ್ಯಾಚರಣೆಯನ್ನು ಪ್ರಸ್ತಾಪಿಸಿ ರಾಹುಲ್ ಗಾಂಧಿಗೆ ತಿರುಗೇಟು ನೀಡಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ರಾಹುಲ್ ಗಾಂಧಿ ಅವರ ಪೋಸ್ಟ್ಗೆ ಪ್ರತಿಕ್ರಿಯಿಸಿರುವ ರಿಜಿಜು, ಸಶಸ್ತ್ರ ಮಾವೋವಾದಿಗಳನ್ನು ನಿರ್ಮೂಲನೆ ಮಾಡುತ್ತಿರುವ ಪ್ರಧಾನಿ ಮೋದಿಗೆ ರಾಹುಲ್ ಧನ್ಯವಾದ ಹೇಳಬೇಕು ಎಂದು ವ್ಯಂಗ್ಯವಾಡಿದ್ದಾರೆ. ಇದೇ ವೇಳೆ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ನಕ್ಸಲಿಸಂ ಮತ್ತು ಎಡಪಂಥೀಯ ಉಗ್ರವಾದವನ್ನು ದೇಶದ ಆಂತರಿಕ ಭದ್ರತೆಗೆ ಅತಿದೊಡ್ಡ ಅಪಾಯ ಎಂದು ಬಣ್ಣಿಸಿದ್ದ ಮಾತುಗಳನ್ನು ನೆನಪಿಸಿದ್ದಾರೆ.
ಅಲ್ಲದೆ, ಸಶಸ್ತ್ರ ಮಾವೋವಾದಿಗಳ ವಿರುದ್ಧದ ಹೋರಾಟದ ಬಳಿಕ ಮುಂದಿನ ಗುರಿ ‘ದಿಮಾಗಿ ನಕ್ಸಲರು’ ಎಂದು ರಿಜಿಜು ತಮ್ಮ ಪೋಸ್ಟ್ನಲ್ಲಿ ಉಲ್ಲೇಖಿಸಿದ್ದಾರೆ. ಈ ಮೂಲಕ ಕಾಂಗ್ರೆಸ್ ವಿರುದ್ಧ ತಮ್ಮ ವಾಗ್ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.
ಇದನ್ನೂ ಓದಿ:
ಮೋದಿ ವಿರುದ್ಧ ರಾಹುಲ್ ಸವಾಲು
ಇದಕ್ಕೂ ಮೊದಲು ರಾಹುಲ್ ಗಾಂಧಿ, ಪ್ರಧಾನಿ ಮೋದಿ ಅವರಿಗೆ ಬಹಿರಂಗ ಚರ್ಚೆಯ ಆಹ್ವಾನ ನೀಡಿದ್ದರು. ಯಾರು ದೇಶವಿರೋಧಿಗಳು ಮತ್ತು ಯಾರು ವಿದೇಶಿ ಶಕ್ತಿಗಳ ಪ್ರಭಾವದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ಚರ್ಚಿಸೋಣ ಎಂದು ಸವಾಲು ಹಾಕಿದ್ದರು. ತಮ್ಮ ಪಕ್ಷದ ನಾಯಕರನ್ನು ಪ್ರಧಾನಿ ನಕ್ಸಲರು ಎಂದು ಕರೆಯುತ್ತಿದ್ದಾರೆ ಎಂಬ ಆರೋಪವನ್ನೂ ಮಾಡಿದ್ದರು.
ಸಿಆರ್ಪಿಎಫ್ ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿದ್ದ ರಾಹುಲ್, ಅವರ ಮುಖಭಾವವೇ ಪ್ರಧಾನಿ ಹೇಳಿಕೆಗಳ ಬಗ್ಗೆ ಅವರಿಗೆ ನಂಬಿಕೆ ಇಲ್ಲ ಎಂಬುದನ್ನು ತೋರಿಸುತ್ತಿತ್ತು ಎಂದು ಹೇಳಿದ್ದರು. ಅಲ್ಲದೆ, ಪ್ರಧಾನಿ ಯಾವಾಗ, ಎಲ್ಲಿ ಬೇಕಾದರೂ ಚರ್ಚೆಗೆ ಬರಬಹುದು ಎಂದು ಪುನರುಚ್ಚರಿಸಿದ್ದರು.



