ಹೊಸದಿಗಂತ ವರದಿ ಗದಗ:
ಬಡ್ಡಿ ದಂಧೆಕೋರರ ಕಿರುಕುಳಕ್ಕೆ ಓರ್ವ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗದಗದಲ್ಲಿ ನಡೆದಿದೆ.
38 ವರ್ಷದ ಸಂಪತ್ತ ದಂಡಗಿ ಎಂಬಾತ ಆತ್ಮಹತ್ಯೆ ಮಾಡಿಕೊಂಡ ಯುವಕ. ನಗರದ ಕರೆಮ್ಮ ಕಲ್ ಬಡಾವಣೆಯಲ್ಲಿ ಘಟನೆ ನಡೆದಿದೆ. ಬಡ್ಡಿ ದಂಧೆಕೋರರ ಕಿರುಕುಳ, ಧಮ್ಕಿಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೋಷಕರ ಆರೋಪವಾಗಿದೆ. ಧರ್ಮಗೌಡ ಕರಿಯನಗೌಡ್ರ ಎಂಬುವರು ಸಂಪತ್ತಗೆ ಫೋನ್ ಮಾಡಿ ಬಡ್ಡಿ, ಹಣಕ್ಕಾಗಿ ನಿತ್ಯ ಕಿರುಕುಳ ನೀಡುತ್ತಿದ್ದರು ಎಂಬುದು ಕುಟುಂಬಸ್ಥರ ಆರೋಪವಾಗಿದೆ. ಸಂಪತ್ ನ ಪತ್ನಿ ಸ್ನೇಹಾಗೂ ಫೋನ್ ಮಾಡಿ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.
ಬಡ್ಡಿ ದಂಧೆಕೊರ ಧರ್ಮಗೌಡ ಕರಿಯನಗೌಡ್ರ, ರವಿ ಶಿವನಗುತ್ತಿ ಎಂಬುವರು ಧಮ್ಕಿ ಹಾಕುತ್ತಿದ್ದರು. ನಿನ್ನ ಹಾಗೂ ನಿನ್ನ ಪತ್ನಿ ಹೆಸರಿನಲ್ಲಿ ಚೆಕ್ ಗಳಿವೆ. ಅವುಗಳ ಚೆಕ್ ಬೌನ್ಸ್ ಕೇಸ್ ಹಾಕ್ತೀನಿ ಎಂದು ಬೆದರಿಕೆ ಹಾಕುತ್ತಿದ್ದರು. ಕಿರುಕುಳ, ಬೆದರಿಕೆಗೆ ಹೆದರಿ ಸಂಪತ್ತ ಮಾಡಿಕೊಂಡ ಎಂದು ಪತ್ನಿ ಹಾಗೂ ಅವರ ತಾಯಿ ಆರೋಪಿಸಿದ್ದಾರೆ. ಈ ಕುರಿತು ಗದಗನ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಪತ್ ಸೆಲ್ಫಿ ವಿಡಿಯೋ:
ಬಡ್ಡಿದಂಧೆಕೊರರ ಕಿರುಕುಳಕ್ಕೆ ಬೇಸತ್ತ ಯುವಕ ಸೆಲ್ಫಿ ವೀಡಿಯೋ ಮಾಡಿ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಜನರಿಗೆ ಉಪಕಾರ ಮಾಡಲು ಹೋಗಿ ಈ ಸ್ಥಿತಿ ಬಂದಿದೆ ಅಂತ ಮೃತ ಸಂಪತ್ ದಂಡಗಿ ಸೆಲ್ಫಿ ವೀಡಿಯೋ ಮೂಲಕ ಅಳಲು ತೋಡಿಕೊಂಡಿದ್ದಾನೆ. ಬೇಸರದಿಂದ ನಿರ್ಧಾರ ಮಾಡುತ್ತಿದ್ದೇನೆ. ಕಷ್ಟ ಅಂತಾ ಬಂದ್ರೆ ಸಹಾಯ ಮಾಡಬಾರದು. ಬೇರೆಯವರಿಗೆ ಸಹಾಯ ಮಾಡಲು ಹೋಗಿ ಹೀಗಾಯಿತು. ನನಗೆ ಕಷ್ಟ ಅಂತಾ ಬಂದಾಗ ಯಾರೂ ಬರಲಿಲ್ಲ. ಬದುಕಬೇಕು ದುಡಿಯಬೇಕು ಅಂದಾಗ ತೊಂದರೆ ಮಾಡದರು. ಮಾರುತಿ ಕರಣೆ ಅನ್ನೋರು ನನ್ನ ಹೆಸರು ಅಪಪ್ರಚಾರ ಮಾಡಿದ್ದಾರೆ. ಧರ್ಮಗೌಡ ಕರಿಯನಗೌಡ್ರ ಅನ್ನೋರ ಬಳಿ ಹಣ ಪಡೆದಿದ್ದಕ್ಕೆ ಧಮ್ಕಿ ಹಾಕುತ್ತಿದ್ದಾರೆ. ದಿಕ್ಕುತೋಚದಂತಾಗಿ ಈ ನಿರ್ಧಾರ ಮಾಡಿದ್ದೇನೆ ಅಂತಾ ವೀಡಿಯೋದಲ್ಲಿ ಹೇಳಿದ್ದಾರೆ.
ಆತ್ಮಹತ್ಯೆ ಸ್ಥಳದಲ್ಲಿ ಡೆತ್ ನೋಟ್:
ಸಂಪತ್ ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಡೆತ್ ನೋಡ್ ಸಹ ಪತ್ತೆಯಾಗಿದೆ. ಸಂಪತ್ ಅವರು ಸುಮಾರು 60 ಲಕ್ಷ ರೂಪಾಯಿ ಹಣ ಬಡ್ಡಿ ರೂಪದಲ್ಲಿ ಪಡೆದು ಬೇರೆಯವರಿಗೆ ಕೊಟ್ಟಿದ್ದ ಎಂಬುದು ಉಲ್ಲೇಖವಿದೆ. ಧರ್ಮಗೌಡ ಎನ್ನುವರಿಂದ 3.5 ಬಡ್ಡಿಯಂತೆ ಹಣ ಪಡೆದಿದ್ದ. ಸಂಪತ್ ಅವರು ಮಂಜುನಾಥ್ ಪವಾರ್, ಕೃಷ್ಣಾಸಾ ಪವಾರ್, ಛಾಯಾ ಕುಲಕರ್ಣಿ, ಜಯರಾಮ್ ಎನ್ನುವರಿಗೆ ಹಣ ಕೊಟ್ಟಿದ್ದ. ಇವರು ಹಣ ಪಡೆದು ವಾಪಾಸ್ ಕೊಡದಿದ್ದಕ್ಕೆ ವ್ಯವಹಾರದಲ್ಲಿ ತೊಂದರೆಯಾಗಿದೆ. ಆ ಸಾಲ ತೀರಿಸಲು ಧರ್ಮಗೌಡನಿಂದ ಹಣ ಪಡೆದಿದ್ದ. ಬಡ್ಡಿ ಹಣ ಮರಳಿ ಕೊಡದಕ್ಕೆ ಧರ್ಮಗೌಡನಿಂದ ಕಿರುಕುಳ ನೀಡುತ್ತಿದ್ದರು. ಈ ಬಗ್ಗೆ ಮೊಬೈಲ್ ಆಡಿಯೋ, ಮನೆ ಸಿ.ಸಿ ಕ್ಯಾಮೆರಾ ಪರಿಶೀಲನೆ ಮಾಡುವಂತೆ ಡೆತ್ ನೋಟ್ ನಲ್ಲಿ ಉಲ್ಲೇಖವಾಗಿದೆ.
ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಆರೋಪಿಗಳಿಗಾಗಿ ಬೆಟಗೇರಿ ಬಡಾವಣೆ ಪೊಲೀಸರು ಬಲೆ ಬಿಸಿದ್ದಾರೆ.



