ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಬೆಳಗಾವಿ ಜಿಲ್ಲೆಯ ಘಟಪ್ರಭಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಇದರ ಪರಿಣಾಮವಾಗಿ ಜಿಲ್ಲೆಯ ಪ್ರಮುಖ ಜಲಾಶಯವಾದ ಹಿಡಕಲ್ ಜಲಾಶಯವು ವೇಗವಾಗಿ ಭರ್ತಿಯಾಗುತ್ತಿದ್ದು, ಜಲಾಶಯದ ಹಿನ್ನೀರಿನಲ್ಲಿರುವ ಐತಿಹಾಸಿಕ ಹುನ್ನೂರು ವಿಠ್ಠಲ ದೇವಸ್ಥಾನವು ಮತ್ತೆ ಸಂಪೂರ್ಣವಾಗಿ ಜಲಾವೃತಗೊಂಡಿದೆ.
ಜಲಾಶಯ ನಿರ್ಮಾಣದ ಬಳಿಕ ನೀರಿನಲ್ಲೇ ಉಳಿದ ಗುಡಿ!
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹುನ್ನೂರು ಗ್ರಾಮದ ಈ ವಿಠ್ಠಲ ದೇವಸ್ಥಾನಕ್ಕೆ ದಶಕಗಳ ಇತಿಹಾಸವಿದೆ. 1978 ರಲ್ಲಿ ಹಿಡಕಲ್ ಜಲಾಶಯ ನಿರ್ಮಾಣವಾದಾಗ ಇಡೀ ಹುನ್ನೂರು ಗ್ರಾಮವು ಮುಳುಗಡೆಯಾಗಿತ್ತು. ಆ ಸಂದರ್ಭದಲ್ಲಿ ಇಡೀ ಗ್ರಾಮವನ್ನು ಬೇರೆಡೆಗೆ ಸ್ಥಳಾಂತರಿಸಲಾಯಿತಾದರೂ, ಈ ಪುರಾತನ ವಿಠ್ಠಲ ದೇವಸ್ಥಾನ ಮಾತ್ರ ಜಲಾಶಯದ ಹಿನ್ನೀರಿನ ಅದೇ ಜಾಗದಲ್ಲಿ ಉಳಿದುಕೊಂಡಿತ್ತು. ಅಂದಿನಿಂದ ಇಂದಿನವರೆಗೆ ಪ್ರತಿ ವರ್ಷ ಮಳೆಗಾಲದಲ್ಲಿ ಈ ದೇವಸ್ಥಾನ ಮುಳುಗಡೆಯಾಗುತ್ತಾ ಬಂದಿದೆ.
ಬೇಸಿಗೆಯಲ್ಲಿ ದರುಶನ ನೀಡಿದ್ದ ವಿಠ್ಠಲ, ಈಗ ಮತ್ತೆ ಮುಳುಗಡೆ!
ಈ ವರ್ಷ ಬೇಸಿಗೆಯ ಅವಧಿಯಲ್ಲಿ ಹಿಡಕಲ್ ಜಲಾಶಯದ ನೀರಿನ ಮಟ್ಟ ತೀವ್ರವಾಗಿ ಇಳಿಕೆಯಾಗಿದ್ದಾಗ, ಈ ಐತಿಹಾಸಿಕ ದೇವಸ್ಥಾನವು ಸಂಪೂರ್ಣವಾಗಿ ನೀರಿನಿಂದ ಹೊರಗೆ ಬಂದು ಭಕ್ತರಿಗೆ ಕಣ್ಣುತುಂಬಿಕೊಳ್ಳಲು ಅವಕಾಶ ಮಾಡಿಕೊಟ್ಟಿತ್ತು. ಈ ಸಂದರ್ಭದಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಭಕ್ತರು ಜಲಾಶಯದ ಒಳಭಾಗಕ್ಕೆ ತೆರಳಿ ವಿಠ್ಠಲನ ದರುಶನ ಪಡೆದಿದ್ದರು. ಆದರೆ, ಪ್ರಸ್ತುತ ಮಳೆ ತೀವ್ರಗೊಂಡಿರುವುದರಿಂದ ದೇವಸ್ಥಾನವು ಮತ್ತೆ ಮುಂದಿನ ಬೇಸಿಗೆಯವರೆಗೆ ನೀರಿನ ಗರ್ಭ ಸೇರಿದೆ.
ಇದನ್ನೂ ಓದಿ:
ನಾಲ್ಕು ದಶಕಗಳ ಕಾಲ ನೀರಿನಲ್ಲಿದ್ದರೂ ಜಗ್ಗದ ಕಟ್ಟಡ!
ಈ ದೇವಸ್ಥಾನದ ಅತ್ಯಂತ ದೊಡ್ಡ ವಿಶೇಷವೆಂದರೆ, 1978 ರಿಂದ ಇಂದಿನವರೆಗೂ ಅಂದರೆ ಸುಮಾರು ನಾಲ್ಕು ದಶಕಗಳಿಗೂ ಹೆಚ್ಚು ಕಾಲ ವರ್ಷದ ಬಹುತೇಕ ದಿನಗಳು ನೀರಿನಲ್ಲೇ ಮುಳುಗಿದ್ದರೂ, ದೇವಸ್ಥಾನದ ಕಲ್ಲಿನ ಗೋಡೆಗಳಾಗಲಿ ಅಥವಾ ಇಡೀ ಕಟ್ಟಡಕ್ಕಾಗಲಿ ಯಾವುದೇ ರೀತಿಯ ಹಾನಿಯಾಗಿಲ್ಲ. ಇಂತಹ ವಾಸ್ತುಶಿಲ್ಪದ ಚಮತ್ಕಾರ ಹಾಗೂ ಧಾರ್ಮಿಕ ಹಿನ್ನೆಲೆಯನ್ನು ಕಣ್ಣಾರೆ ವೀಕ್ಷಿಸಲು ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರು ಮತ್ತು ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಪ್ರಸ್ತುತ ಘಟಪ್ರಭಾ ನದಿಯ ತೀರದ ಜನರಿಗೆ ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಸೂಚಿಸಿದೆ.



