July 10, 2026
Friday, July 10, 2026
spot_img

ಜಿಬಿಎ ಚುನಾವಣೆ ಮುಂದೂಡಿಕೆಗೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ರಾಜ್ಯ ಸರ್ಕಾರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್

ಬೆಂಗಳೂರಿನ ಸ್ಥಳೀಯ ಸಂಸ್ಥೆ ಚುನಾವಣೆ ಎದುರುನೋಡುತ್ತಿದ್ದ ನಾಗರಿಕರಿಗೆ ಭಾರಿ ನಿರಾಸೆಯಾಗುವ ಮುನ್ಸೂಚನೆ ಸಿಕ್ಕಿದೆ. ಮುಂಬರುವ ಆಗಸ್ಟ್‌ನೊಳಗೆ ಗ್ರೇಟರ್ ಬೆಂಗಳೂರು ಅಥಾರಿಟಿ ಚುನಾವಣೆ ನಡೆಸಬೇಕೆಂದು ಸುಪ್ರೀಂ ಕೋರ್ಟ್ ಈ ಹಿಂದೆ ಕಟ್ಟುನಿಟ್ಟಿನ ಆದೇಶ ನೀಡಿದ್ದರೂ, ಪ್ರಸ್ತುತ ಪರಿಸ್ಥಿತಿಯಲ್ಲಿ ಆಗಸ್ಟ್‌ನಲ್ಲಿ ಎಲೆಕ್ಷನ್ ನಡೆಯುವುದು ಅನುಮಾನವಾಗಿದೆ. ತಾಂತ್ರಿಕ ಮತ್ತು ಆಡಳಿತಾತ್ಮಕ ಕಾರಣಗಳನ್ನು ಮುಂದಿಟ್ಟುಕೊಂಡು, ಮುಂಬರುವ ಡಿಸೆಂಬರ್‌ವರೆಗೆ ಚುನಾವಣೆಯನ್ನು ಮುಂದೂಡುವಂತೆ ಕರ್ನಾಟಕ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಅಧಿಕೃತ ಮನವಿ ಸಲ್ಲಿಸಿದೆ.

ಸರ್ಕಾರ ನೀಡಿದ ಪ್ರಮುಖ ಕಾರಣಗಳು

ಬೆಂಗಳೂರು ವ್ಯಾಪ್ತಿಯಲ್ಲಿ ಪ್ರಸ್ತುತ ಸುಮಾರು 1.03 ಕೋಟಿ ಮತದಾರರಿದ್ದಾರೆ. ನಿಖರವಾದ ಪಟ್ಟಿ ಸಿದ್ಧಪಡಿಸಲು ಸುಮಾರು 40 ಲಕ್ಷ ಮನೆಗಳಿಗೆ ಅಧಿಕಾರಿಗಳು ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಬೇಕಾಗಿದೆ. ಕರಡು ಮತದಾರರ ಪಟ್ಟಿ ಪ್ರಕಟಣೆ, ಆಕ್ಷೇಪಣೆಗಳ ಸ್ವೀಕಾರ ಮತ್ತು ಅವುಗಳ ವಿಚಾರಣೆ ಇನ್ನೂ ಬಾಕಿ ಇದೆ. ಪ್ರತಿ ವಿಧಾನಸಭಾ ಕ್ಷೇತ್ರದಿಂದ ಕನಿಷ್ಠ 1 ಲಕ್ಷಕ್ಕೂ ಹೆಚ್ಚು ಅರ್ಜಿಗಳು ಅಥವಾ ಆಕ್ಷೇಪಣೆಗಳು ಬರಬಹುದು ಎಂದು ಸರ್ಕಾರ ಅಂದಾಜಿಸಿದೆ. ಚುನಾವಣೆ ನಡೆಸಬೇಕಾದ ಅದೇ ಸರ್ಕಾರಿ ಸಿಬ್ಬಂದಿಗಳೇ ಸದ್ಯ ಎಸ್‌ಐಆರ್ ಪ್ರಕ್ರಿಯೆಯ ಕೆಲಸಗಳಲ್ಲೂ ನಿರತರಾಗಿದ್ದಾರೆ ಎಂದು ಸಮರ್ಥಿಸಿಕೊಂಡಿದೆ.

‘ಅರೆಬರೆ ಪಟ್ಟಿಯಿಂದ ಚುನಾವಣೆ ಅಸಾಧ್ಯ’

ಪ್ರತಿಯೊಂದು ಅರ್ಜಿ ಮತ್ತು ಆಕ್ಷೇಪಣೆಯನ್ನು ಕಾನೂನುಬದ್ಧವಾಗಿ ವಿಚಾರಣೆ ನಡೆಸಿ ಆದೇಶ ನೀಡುವುದು ಕಡ್ಡಾಯವಾಗಿದೆ. “ಅರೆಬರೆ ಅಥವಾ ತಪ್ಪುಗಳಿರುವ ಮತದಾರರ ಪಟ್ಟಿಯನ್ನು ಇಟ್ಟುಕೊಂಡು ಚುನಾವಣೆ ನಡೆಸುವುದು ಸೂಕ್ತವಲ್ಲ. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗೆ ಅಂತಿಮ ಹಾಗೂ ಸಂಪೂರ್ಣ ನಿಖರವಾದ ಮತದಾರರ ಪಟ್ಟಿ ಅತ್ಯಗತ್ಯ. ಹೀಗಾಗಿ ಡಿಸೆಂಬರ್‌ವರೆಗೂ ಕಾಲಾವಕಾಶ ನೀಡಬೇಕು” ಎಂದು ಸರ್ಕಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಮನವಿಯಲ್ಲಿ ವಿವರಿಸಿದೆ.

ಇದನ್ನೂ ಓದಿ:

ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಪಕ್ಷಗಳ ವಾಗ್ದಾಳಿ

ಸರ್ಕಾರದ ಈ ಧೋರಣೆಯ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. “ಬೆಂಗಳೂರಿನಲ್ಲಿ ಕಾಂಗ್ರೆಸ್ ತೀವ್ರವಾದ ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿದೆ. ಗ್ಯಾರಂಟಿ ಯೋಜನೆಗಳ ವೈಫಲ್ಯ ಮತ್ತು ಹದಗೆಟ್ಟ ರಸ್ತೆಗಳ ಕೋಪಕ್ಕೆ ಹೆದರಿ ಚುನಾವಣೆ ಎದುರಿಸಲು ಧೈರ್ಯವಿಲ್ಲದೆ ಒಂದಲ್ಲ ಒಂದು ತಾಂತ್ರಿಕ ನೆಪಗಳನ್ನು ಹೇಳಿ ಕೋರ್ಟ್ ಮೂಲಕ ಕಾಲಹರಣ ಮಾಡುತ್ತಿದೆ” ಎಂದು ವಿಪಕ್ಷಗಳು ಕಟುವಾಗಿ ಟೀಕಿಸಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !