ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಹಾಮಾಸ್ ದೇಶದ 53ನೇ ಸ್ವಾತಂತ್ರ್ಯ ದಿನಾಚರಣೆಯ ಖುಷಿಯ ನಡುವೆಯೇ ನಾರ್ತ್ ಆಂಡ್ರೋಸ್ನಲ್ಲಿ ಭೀಕರ ವಿಮಾನ ಅಪಘಾತ ಸಂಭವಿಸಿದೆ. ಫ್ಲೆಮಿಂಗೊ ಏರ್ ಸಂಸ್ಥೆಗೆ ಸೇರಿದ ಸೆಸ್ನಾ 402 ವಿಮಾನವು ಪತನಗೊಂಡಿದ್ದು, ಅದರಲ್ಲಿದ್ದ ಎಲ್ಲಾ ಹತ್ತು ಮಂದಿ ದುರಂತವಾಗಿ ಕೊನೆಯುಸಿರೆಳೆದಿದ್ದಾರೆ. ಈ ಘಟನೆ ಇಡೀ ದೇಶವನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ.
ಪ್ರಧಾನಿ ಸಂತಾಪ ಹಾಗೂ ಕಾರ್ಯಾಚರಣೆ
ಘಟನೆಗೆ ಸಂಬಂಧಿಸಿದಂತೆ ಮಾಹಿತಿ ನೀಡಿರುವ ಬಹಾಮಾಸ್ ಪ್ರಧಾನಿ ಫಿಲಿಪ್ ಬ್ರೇವ್ ಡೇವಿಸ್ ಅವರು, ಆರಂಭದಲ್ಲಿ ಒಬ್ಬರು ಬದುಕುಳಿದಿದ್ದಾರೆ ಎನ್ನಲಾಗಿತ್ತಾದರೂ, ನಂತರ ಅವರೂ ಮೃತಪಟ್ಟಿರುವುದಾಗಿ ಅಧಿಕೃತವಾಗಿ ದೃಢಪಡಿಸಿದರು. “ಇದು ನಮಗೆ ಅತ್ಯಂತ ಕರಾಳ ದಿನವಾಗಿದ್ದು, ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳ ದುಃಖದಲ್ಲಿ ನಾವು ಭಾಗಿಗಳಾಗಿದ್ದೇವೆ” ಎಂದು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಫ್ಲೆಮಿಂಗೊ ಏರ್ ಲೈಸೆನ್ಸ್ ಅಮಾನತು
ಅಧಿಕಾರಿಗಳ ಪ್ರಕಾರ, ಈ ದುರಂತ ವಿಮಾನವು ನಸ್ಸೌನ ಲಿಂಡೆನ್ ಪಿಂಡ್ಲಿಂಗ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸ್ಯಾನ್ ಆಂಡ್ರೋಸ್ ಕಡೆಗೆ ಪ್ರಯಾಣ ಬೆಳೆಸಿತ್ತು. ಬಹಮಾಯನ್ ವಿಮಾನ ಅಪಘಾತ ತನಿಖಾ ಪ್ರಾಧಿಕಾರವು ಈಗಾಗಲೇ ತನಿಖೆಯನ್ನು ಚುರುಕುಗೊಳಿಸಿದ್ದು, ಮೃತರ ಗುರುತು ಪತ್ತೆ ಹಚ್ಚಲಾಗುತ್ತಿದೆ. ಸುರಕ್ಷತೆಯ ದೃಷ್ಟಿಯಿಂದ ನಾಗರಿಕ ವಿಮಾನಯಾನ ಸಚಿವಾಲಯವು ಫ್ಲೆಮಿಂಗೊ ಏರ್ನ ‘ಏರ್ ಆಪರೇಟರ್ ಪ್ರಮಾಣಪತ್ರ’ವನ್ನು (Air Operator Certificate) ತಾತ್ಕಾಲಿಕವಾಗಿ ರದ್ದುಗೊಳಿಸಿದೆ.



