ಹೊಸದಿಗಂತ ಡಿಜಿಟಲ್ ಡೆಸ್ಕ್:
‘ಕರಾವಳಿ’ ಸಿನಿಮಾ ಸುತ್ತ ನಡೆಯುತ್ತಿರುವ ವಿವಾದದ ನಡುವೆ ನಟ ಪ್ರಜ್ವಲ್ ದೇವರಾಜ್ ಮೊದಲ ಬಾರಿಗೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ. ತಮ್ಮ ಪಾತ್ರದ ಡಬ್ಬಿಂಗ್ ಹಾಗೂ ಸಂಭಾವನೆ ವಿಚಾರದಲ್ಲೇ ಎಲ್ಲಾ ಗೊಂದಲ ಆರಂಭವಾಗಿದೆ ಎಂದು ಅವರು ಹೇಳಿದ್ದಾರೆ.
ಡಬ್ಬಿಂಗ್ ಮತ್ತು ಸಂಭಾವನೆ ವಿವಾದ
ಪ್ರಜ್ವಲ್ ಅವರ ಪ್ರಕಾರ, ಟ್ರೇಲರ್ ಬಿಡುಗಡೆಯಾಗುವ ಮುನ್ನ ತಮ್ಮ ಅನುಮತಿ ಪಡೆಯದೇ ಪಾತ್ರಕ್ಕೆ ಬೇರೊಬ್ಬರಿಂದ ಡಬ್ಬಿಂಗ್ ಮಾಡಲಾಗಿತ್ತು. ಜೊತೆಗೆ ಒಪ್ಪಂದದಂತೆ ಸಂಪೂರ್ಣ ಸಂಭಾವನೆಯೂ ಪಾವತಿಯಾಗಿರಲಿಲ್ಲ. ಇದೇ ಕಾರಣಕ್ಕೆ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ:
ಪ್ರಚಾರದಿಂದ ದೂರವಿಟ್ಟ ಆರೋಪ
ಬಾಕಿ ಸಂಭಾವನೆ ಪಾವತಿಯಾದ ಬಳಿಕ ಡಬ್ಬಿಂಗ್ ಹಾಗೂ ಚಿತ್ರದ ಪ್ರಚಾರಕ್ಕೆ ಸಿದ್ಧನಾಗಿದ್ದೆ. ಆದರೆ ನಂತರ ಚಿತ್ರತಂಡವೇ ನನ್ನ ಮ್ಯಾನೇಜರ್‌ಗೆ ಕರೆ ಮಾಡಿ ಡಬ್ಬಿಂಗ್ ಅಥವಾ ಪ್ರಚಾರದಲ್ಲಿ ಭಾಗವಹಿಸುವ ಅಗತ್ಯವಿಲ್ಲ ಎಂದು ತಿಳಿಸಿತು. ಹೀಗಾಗಿ ಚಿತ್ರದಿಂದ ದೂರ ಉಳಿದಿರುವುದು ನನ್ನ ಸ್ವಂತ ನಿರ್ಧಾರವಲ್ಲ ಎಂದು ಪ್ರಜ್ವಲ್ ಹೇಳಿದ್ದಾರೆ.
ಇಲ್ಲಿಗೇ ವಿವಾದಕ್ಕೆ ತೆರೆ
ತಮ್ಮ ಧ್ವನಿ ಪಾತ್ರಕ್ಕೆ ಸೂಕ್ತವಲ್ಲ ಎಂದು ಸಾರ್ವಜನಿಕವಾಗಿ ಹೇಳಿರುವುದು ಬೇಸರ ತಂದಿದೆ ಎಂದು ಪ್ರಜ್ವಲ್ ತಿಳಿಸಿದ್ದಾರೆ. ಆದರೂ ಈ ವಿಚಾರವನ್ನು ಮತ್ತಷ್ಟು ಮುಂದುವರಿಸುವ ಉದ್ದೇಶ ಇಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ವೈಯಕ್ತಿಕ ಭಿನ್ನಾಭಿಪ್ರಾಯಗಳು ಚಿತ್ರದ ಪರಿಶ್ರಮಕ್ಕೆ ಧಕ್ಕೆಯಾಗಬಾರದು ಎಂದು ಆಶಿಸಿದ್ದಾರೆ. ಜೊತೆಗೆ, ಚಿತ್ರತಂಡಕ್ಕೆ ಶುಭ ಹಾರೈಸಿ, ಅಭಿಮಾನಿಗಳು ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಿ ಬೆಂಬಲಿಸಬೇಕು ಎಂದು ಮನವಿ ಮಾಡಿದ್ದಾರೆ.



