ಭಾನುವಾರ ಬಂತೆಂದರೆ ಸಾಕು ನಾನ್‌ವೆಜ್ ಪ್ರಿಯರಿಗೆ ಬಿರಿಯಾನಿ ಇರಲೇಬೇಕು. ಆದರೆ ಸಸ್ಯಹಾರಿಗಳಿಗೂ ಮಟನ್ ಬಿರಿಯಾನಿಯಷ್ಟೇ ಗಮ್ಮತ್ತಾದ ರುಚಿ ನೀಡುವ ಒಂದು ಅದ್ಭುತ ಕಾಯಿ ಎಂದರೆ ಅದು ‘ಹಸಿ ಹಲಸಿನಕಾಯಿ’. ಆರೋಗ್ಯದ ದೃಷ್ಟಿಯಿಂದಲೂ ಈ ಹಲಸಿನಕಾಯಿ ಬಿರಿಯಾನಿ ಉತ್ತಮವಾಗಿದೆ.
ಬೇಕಾಗುವ ಸಾಮಗ್ರಿಗಳು
ಹಸಿ ಹಲಸಿನಕಾಯಿ
ಬಾಸ್ಮತಿ ಅಕ್ಕಿ
ಮೊಸರು
ಈರುಳ್ಳಿ
ಟೊಮೆಟೊ
ಶುಂಠಿ-ಬೆಳ್ಳುಳ್ಳಿ ಪೇಸ್ಟ್
ಬಿರಿಯಾನಿ ಮಸಾಲಾ
ಅಚ್ಚಖಾರದ ಪುಡಿ
ಅರಿಶಿನ ಮತ್ತು ಉಪ್ಪು
ಹಸಿಮೆಣಸಿನಕಾಯಿ
ಪುದೀನಾ ಮತ್ತು ಕೊತ್ತಂಬರಿ ಸೊಪ್ಪು
ತುಪ್ಪ ಮತ್ತು ಎಣ್ಣೆ
ಮಾಡುವ ವಿಧಾನ
ಮೊದಲು ಕತ್ತರಿಸಿದ ಹಲಸಿನಕಾಯಿ ತುಂಡುಗಳಿಗೆ ಸ್ವಲ್ಪ ಉಪ್ಪು ಮತ್ತು ಅರಿಶಿನ ಹಾಕಿ ಕುಕ್ಕರ್‌ನಲ್ಲಿ 1 ಸೀಟಿ ಬರುವವರೆಗೆ ಬೇಯಿಸಿಕೊಂಡು. ನಂತರ ಅದಕ್ಕೆ ಮೊಸರು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಖಾರದ ಪುಡಿ, ಬಿರಿಯಾನಿ ಮಸಾಲಾ ಮತ್ತು ಸ್ವಲ್ಪ ಪುದೀನಾ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ 20 ನಿಮಿಷ ನೆನೆಯಲು ಬಿಡಬೇಕು. ಮತ್ತೊಂದು ಪಾತ್ರೆಯಲ್ಲಿ ನೀರು ಕಾಯಿಸಿ ಅದಕ್ಕೆ ಶಾಹೀಜೀರಾ, ಏಲಕ್ಕಿ, ಲವಂಗ, ದಾಲ್ಚಿನ್ನಿ ಮತ್ತು ಉಪ್ಪು ಹಾಕಿ. ನೀರು ಕುದಿಯುವಾಗ ನೆನೆಸಿದ ಬಾಸ್ಮತಿ ಅಕ್ಕಿ ಹಾಕಿ ಶೇ. 70 ರಷ್ಟು ಮಾತ್ರ ಬೇಯಿಸಿ ನೀರನ್ನು ಬಸಿದು ಇಟ್ಟುಕೊಳ್ಳಬೇಕು.
ನಂತರ ಕುಕ್ಕರ್ ಅಥವಾ ಬಿರಿಯಾನಿ ಪಾತ್ರೆಗೆ ತುಪ್ಪ ಮತ್ತು ಎಣ್ಣೆ ಹಾಕಿ ಬಿಸಿಯಾದಾಗ ಈರುಳ್ಳಿ ಹಾಕಿ ಗೋಲ್ಡನ್ ಬ್ರೌನ್ ಆಗುವವರೆಗೆ ಹುರಿಯಿರಿ. ನಂತರ ಟೊಮೆಟೊ, ಹಸಿ ಮೆಣಸಿನಕಾಯಿ ಹಾಕಿ ಬಾಡಿಸಿ. ಈಗ ಮ್ಯಾರಿನೇಟ್ ಮಾಡಿದ ಹಲಸಿನಕಾಯಿ ಮಿಶ್ರಣವನ್ನು ಹಾಕಿ ಎಣ್ಣೆ ಬಿಡುವವರೆಗೆ ಚೆನ್ನಾಗಿ ಬೇಯಿಸಬೇಕು. ಈಗ ಬೆಂದ ಹಲಸಿನಕಾಯಿ ಗ್ರೇವಿಯ ಮೇಲೆ ಸಿದ್ಧಪಡಿಸಿದ ಬಾಸ್ಮತಿ ರೈಸ್ ಅನ್ನು ಲೇಯರ್ ಆಗಿ ಹಾಕಿ. ಅದರ ಮೇಲೆ ಕರಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಪುದೀನಾ ಮತ್ತು ಒಂದು ಚಮಚ ತುಪ್ಪ ಹಾಕಿ ಮುಚ್ಚಳ ಮುಚ್ಚಿ, ಸಣ್ಣ ಉರಿಯಲ್ಲಿ 10 ರಿಂದ 15 ನಿಮಿಷ ದಮ್ ಕಟ್ಟಿದರೆ ಬಿಸಿಬಿಸಿಯಾದ, ಮಟನ್ ಬಿರಿಯಾನಿಯನ್ನೇ ಮೀರಿಸುವಂತಹ ಹಲಸಿನಕಾಯಿ ಬಿರಿಯಾನಿ ಸವಿಯಲು ಸಿದ್ಧ.



