September 5, 2026
Saturday, September 5, 2026
spot_img

ಗಲ್ಫ್ ರಾಷ್ಟ್ರಗಳಲ್ಲಿ ಹೆಚ್ಚಿದ ಆತಂಕ: ಭಾರತೀಯ ನಾವಿಕರಿದ್ದ ಹಡಗಿನ ಮೇಲೆ ಇರಾನ್ ಕಣ್ಣಿಟ್ಟಿದ್ದೇಕೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ಪಡೆಗಳಿಂದ ತೀವ್ರ ದಾಳಿಗೊಳಗಾಗಿದ್ದ ‘M/V GFS ಗ್ಯಾಲಕ್ಸಿ’ ವಾಣಿಜ್ಯ ಹಡಗಿನಲ್ಲಿದ್ದ 11 ಭಾರತೀಯ ನಾವಿಕರ ಪೈಕಿ 10 ಜನರನ್ನು ಯಶಸ್ವಿಯಾಗಿ ರಕ್ಷಿಸಲಾಗಿದೆ ಎಂದು ಭಾರತದ ವಿದೇಶಾಂಗ ಸಚಿವಾಲಯ ತಿಳಿಸಿದೆ. ಆದರೆ, ದುರದೃಷ್ಟವಶಾತ್ ಇಬ್ಬರ ಪೈಕಿ ಒಬ್ಬ ಸಿಬ್ಬಂದಿ ಇನ್ನೂ ನಾಪತ್ತೆಯಾಗಿದ್ದು, ಸಮುದ್ರದಲ್ಲಿ ತೀವ್ರ ಶೋಧ ಕಾರ್ಯ ಮುಂದುವರಿದಿದೆ. ಈ ದಾಳಿಯನ್ನು ಕಟುವಾಗಿ ಖಂಡಿಸಿರುವ ಭಾರತ, ಅಂತಾರಾಷ್ಟ್ರೀಯ ಜಲಮಾರ್ಗಗಳ ರಕ್ಷಣೆಗೆ ಬಲವಾದ ಒತ್ತಾಯ ಮಾಡಿದೆ.

ಇರಾನ್ ಸಮರ್ಥನೆ ಮತ್ತು ಜಲಮಾರ್ಗ ಬಂದ್

ಸೈಪ್ರಸ್ ಧ್ವಜ ಹೊಂದಿದ್ದ ಈ ಕಂಟೇನರ್ ಹಡಗು ಅಧಿಕೃತ ಜಲಮಾರ್ಗವನ್ನು ಅನುಸರಿಸದ ಕಾರಣ ದಾಳಿ ಮಾಡಬೇಕಾಯಿತು ಎಂದು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಹೇಳಿದೆ. ಮೊದಲು ಎಚ್ಚರಿಕೆ ಗುಂಡು ಹಾರಿಸಿದರೂ ಹಡಗು ಮುನ್ನಡೆದಿದ್ದರಿಂದ ನೇರ ದಾಳಿ ಅನಿವಾರ್ಯವಾಯಿತು ಎಂದಿರುವ ಇರಾನ್, ಸದ್ಯ ಹಾರ್ಮುಜ್ ಜಲಸಂಧಿಯನ್ನು ಬಂದ್ ಮಾಡಿದೆ.

ಅಮೆರಿಕದ ಭೀಕರ ವಾಯುದಾಳಿ ಪ್ರತ್ಯುತ್ತರ

ಈ ಘಟನೆಗೆ ಪ್ರತಿಯಾಗಿ ಅಮೆರಿಕ ಸೇನೆಯು ಇರಾನ್‌ನೊಳಗೆ ತನ್ನ 3ನೇ ಅಲೆಯ ಅತ್ಯಂತ ತೀವ್ರವಾದ ವಾಯುದಾಳಿಗಳನ್ನು ಆರಂಭಿಸಿದೆ. ಯುಎಸ್ ಯುದ್ಧವಿಮಾನಗಳು ಇರಾನ್‌ನ ನೌಕಾ ನೆಲೆ ಹಾಗೂ ಕ್ಷಿಪಣಿ ಕೇಂದ್ರಗಳು ಸೇರಿದಂತೆ ಬರೋಬ್ಬರಿ 140 ಆಯಕಟ್ಟಿನ ಸ್ಥಳಗಳನ್ನು ಗುರಿಯಾಗಿಸಿಕೊಂಡು ಧ್ವಂಸಗೊಳಿಸಿವೆ.

ಪ್ರತೀಕಾರ ಮತ್ತು ರಾಜತಾಂತ್ರಿಕ ಗೊಂದಲ

ಕಳೆದ ವಾರದ ದಾಳಿಗಳಲ್ಲಿ 17 ಜನರು ಸಾವನ್ನಪ್ಪಿದ್ದು, 115ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಇರಾನ್ ಆರೋಗ್ಯ ಸಚಿವಾಲಯ ತಿಳಿಸಿದೆ. ಇದಕ್ಕೆ ಪ್ರತಿಯಾಗಿ ಇರಾನ್ ಸಹ ಜೋರ್ಡಾನ್, ಕತಾರ್ ಮತ್ತು ಬಹ್ರೇನ್‌ನಲ್ಲಿರುವ ಅಮೆರಿಕದ ಮಿಲಿಟರಿ ಸೌಲಭ್ಯಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಗಲ್ಫ್ ಅರಬ್ ರಾಷ್ಟ್ರಗಳು ಒಳಗೊಳಗೆ ಅಮೆರಿಕಕ್ಕೆ ಸಾಥ್ ನೀಡುತ್ತಿದ್ದು, ಇರಾನ್‌ನಲ್ಲಿ ಪ್ರಸ್ತುತ ಅಧಿಕಾರ ಚಲಾಯಿಸುತ್ತಿರುವುದು ಯಾರು ಎಂಬ ಗೊಂದಲ ಉಂಟಾಗಿದೆ ಎಂದು ಅಮೆರಿಕದ ಹಿರಿಯ ಅಧಿಕಾರಿಗಳು ವಿಶ್ಲೇಷಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !