July 12, 2026
Sunday, July 12, 2026
spot_img

ಅಯೋಧ್ಯೆ ಕಾಣಿಕೆ ಎಣಿಕೆ ಅಕ್ರಮದಂತಹಾ ಘಟನೆ ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ: ಬೆಳಗಾವಿ ಬೈಠಕ್‌ನಲ್ಲಿ ಒಕ್ಕೊರಳ ಆಶಯ

ಹೊಸದಿಗಂತ ವರದಿ ಬೆಳಗಾವಿ

​ಬೆಳಗಾವಿ: ನಗರದಲ್ಲಿ ಮೂರು ದಿನಗಳ ಕಾಲ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಾರ್ಷಿಕ ಅಖಿಲ ಭಾರತೀಯ ಪ್ರಾಂತ ಪ್ರಚಾರಕ ಬೈಠಕ್ ಭಾನುವಾರ ಯಶಸ್ವಿಯಾಗಿ ಮುಕ್ತಾಯಗೊಂಡಿದೆ.

ಬೈಠಕ್ ನಲ್ಲಿ ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಮಂದಿರದ ದಾನ ಪೆಟ್ಟಿಗೆಯ ಕಾಣಿಕೆ ಎಣಿಕೆಯಲ್ಲಿ ನಡೆದಿರುವ ಅಕ್ರಮದ ಘಟನೆಗೆ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಸೇರಿದಂತೆ ಸಭೆಯಲ್ಲಿದ್ದ ಮುಖಂಡರೆಲ್ಲರೂ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಭವಿಷ್ಯದಲ್ಲಿ ಇಂತಹ ಯಾವುದೇ ಘಟನೆಗಳು ಮರುಕಳಿಸದಂತೆ ತೀರ್ಥಕ್ಷೇತ್ರ ನ್ಯಾಸವು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಸಮಸ್ತ ರಾಮಭಕ್ತರು ಮಂದಿರದ ಮೇಲಿಟ್ಟಿರುವ ಆಳವಾದ ಶ್ರದ್ಧೆ ಮತ್ತು ನಂಬಿಕೆಗೆ ಯಾವುದೇ ಧಕ್ಕೆಯಾಗಬಾರದು ಎಂದು ಬೈಠಕ್ ಅಪೇಕ್ಷಿಸಿತು.

​ಬೈಠಕ್ ಮುಕ್ತಾಯದ ಹಿನ್ನೆಲೆಯಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಉತ್ತರ ಕರ್ನಾಟಕ ಪ್ರಚಾರ ವಿಭಾಗ ಪ್ರಮುಖ ಕೃಷ್ಣಾ ಜೋಶಿ, ರಾಮಮಂದಿರ ತೀರ್ಥಕ್ಷೇತ್ರ ನ್ಯಾಸದ (ಟ್ರಸ್ಟ್) ಮನವಿಯ ಮೇರೆಗೆ ಈ ಅಕ್ರಮದ ಕುರಿತು ನಡೆಯುತ್ತಿರುವ ಎಸ್‌ಐಟಿ ಮತ್ತು ಪೊಲೀಸ್ ತನಿಖೆ ಶೀಘ್ರದಲ್ಲೇ ನಿರ್ಣಾಯಕ ಹಂತ ತಲುಪಲಿದೆ ಎಂಬ ವಿಶ್ವಾಸವನ್ನು ಸಭೆಯಲ್ಲಿ ವ್ಯಕ್ತಪಡಿಸಲಾಯಿತು ಎಂದರು.

​18,842 ಸ್ವಯಂಸೇವಕರಿಗೆ ತರಬೇತಿ

​ಸರಸಂಘಚಾಲಕ ಡಾ. ಮೋಹನ್ ಭಾಗವತ್ ಹಾಗೂ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಸೇರಿದಂತೆ ದೇಶದ ವಿವಿಧೆಡೆಯಿಂದ 226 ಪ್ರಮುಖ ಕಾರ್ಯಕರ್ತರು ಈ ಬೈಠಕ್‌ನಲ್ಲಿ ಉಪಸ್ಥಿತರಿದ್ದರು. ಮಾರ್ಚ್ 2026ರ ನಂತರ ಸಂಘದ ವಿವಿಧ ಸ್ತರಗಳಲ್ಲಿ ನಡೆದ ಪ್ರಶಿಕ್ಷಣ ವರ್ಗಗಳ ವಿಶ್ಲೇಷಣೆ ನಡೆಸಲಾಯಿತು. ಈ ವರ್ಷ ದೇಶಾದ್ಯಂತ ಒಟ್ಟು 83 ಸಂಘ ಶಿಕ್ಷಾ ವರ್ಗ ಹಾಗೂ 12 ಕಾರ್ಯಕರ್ತ ವಿಕಾಸ ವರ್ಗಗಳು ಸಂಪನ್ನಗೊಂಡಿದ್ದು, ಒಟ್ಟು 18,842 ಸ್ವಯಂಸೇವಕರು ತರಬೇತಿ ಪಡೆದಿದ್ದಾರೆ. ಈ ವರ್ಗಗಳಲ್ಲಿ ಶಾಖಾ ಸಂಚಾಲನೆ, ಸಂಘ ಕಾರ್ಯಪದ್ಧತಿ, ಗ್ರಾಮ ವಿಕಾಸ, ಕುಟುಂಬ ಪ್ರಬೋಧನ, ವಿಪತ್ತು ನಿರ್ವಹಣೆ ಮತ್ತು ಪರಿಸರ ಸಂರಕ್ಷಣೆ ಕುರಿತು ತರಬೇತಿ ನೀಡಲಾಗಿದೆ ಎಂದು ಜೋಶಿ ವಿವರಿಸಿದರು.

​ಶತಾಬ್ದಿ ವರ್ಷದ ಯೋಜನೆ ಮತ್ತು ಶಾಖಾ ವಿಸ್ತಾರ

​ಅಖಿಲ ಭಾರತ ಪ್ರಚಾರ ಪ್ರಮುಖ ಸುನೀಲ್ ಅಂಬೇಕರ್ ಮಾತನಾಡಿ, ಶಾಖೆಗಳ ಸ್ತರದಲ್ಲಿ ಕಾರ್ಯಯೋಜನೆಗಳ ಅನುಷ್ಠಾನ ಹಾಗೂ ಸೆಪ್ಟೆಂಬರ್ ತಿಂಗಳಿನಲ್ಲಿ ಹಮ್ಮಿಕೊಳ್ಳಲಿರುವ ಗರಿಷ್ಠ ಶಾಖಾ ವಿಸ್ತಾರ ಯೋಜನೆಯ ಕುರಿತು ವಿವರವಾದ ಚರ್ಚೆ ನಡೆಸಲಾಯಿತು. ಸಂಘದ ಶತಾಬ್ದಿ ವರ್ಷದ ಅಂಗವಾಗಿ ನಡೆದ ಕಾರ್ಯಕ್ರಮಗಳ ವಿಶ್ಲೇಷಣೆ ಹಾಗೂ ಬಾಕಿ ಇರುವ ಕಾರ್ಯಕ್ರಮಗಳ ರೂಪುರೇಷೆ ಸಿದ್ಧಪಡಿಸಲಾಯಿತು. ಶತಾಬ್ದಿ ವರ್ಷದ ಮೂಲಕ ಸಂಪರ್ಕಕ್ಕೆ ಬಂದ ಸಾರ್ವಜನಿಕರನ್ನು ಸಾಮಾಜಿಕ ಕಾರ್ಯಗಳಲ್ಲಿ ಹಾಗೂ ಪಂಚ ಪರಿವರ್ತನೆಯ ವಿಷಯಗಳಲ್ಲಿ ಸಕ್ರಿಯಗೊಳಿಸುವ ಕುರಿತು ಮತ್ತು 2026-27ನೇ ಸಾಲಿನ ಸರಸಂಘಚಾಲಕರ ಪ್ರವಾಸದ ಯೋಜನೆಯ ಕುರಿತು ಚರ್ಚಿಸಲಾಯಿತು ಎಂದರು.

ಇದನ್ನೂ ಓದಿ:

​​ಜನಸಂಖ್ಯಾ ಅಸಮತೋಲನ, ಡ್ರಗ್ಸ್ ಹಾವಳಿ ಕುರಿತು ಕಳವಳ

ಪ್ರಸ್ತುತ ದೇಶ ಎದುರಿಸುತ್ತಿರುವ ವಿವಿಧ ಸಾಮಾಜಿಕ ಸವಾಲುಗಳ ಕುರಿತೂ ಬೈಠಕ್‌ನಲ್ಲಿ ಸುದೀರ್ಘ ಮಂಥನ ನಡೆಯಿತು. ವಿಶೇಷವಾಗಿ ಮುಂಬರುವ ಜನಗಣತಿಯ ಸಂದರ್ಭದ ಮಾಹಿತಿ, ಜನಸಂಖ್ಯಾ ಅಸಮತೋಲನದಿಂದ ಎದುರಾಗಬಹುದಾದ ಸವಾಲುಗಳು ಹಾಗೂ ದೇಶದಲ್ಲಿ ಹೆಚ್ಚುತ್ತಿರುವ ಮಾದಕ ದ್ರವ್ಯ ಜಾಲದ ದುಷ್ಪರಿಣಾಮಗಳ ಬಗ್ಗೆ ಸಭೆಯಲ್ಲಿ ತೀವ್ರ ಕಳವಳ ವ್ಯಕ್ತಪಡಿಸಲಾಯಿತು. ಸಮಾಜವನ್ನು ವ್ಯಸನಮುಕ್ತಗೊಳಿಸಲು ಆದ್ಯತೆಯ ಮೇರೆಗೆ ಜಾಗೃತಿ ಪ್ರಯತ್ನಗಳನ್ನು ನಡೆಸಲು ತೀರ್ಮಾನಿಸಲಾಯಿತು. ಇದರೊಂದಿಗೆ ಸಂತ ಶಿರೋಮಣಿ ರವಿದಾಸ ಮಹಾರಾಜರ 650ನೇ ಜಯಂತ್ಯೋತ್ಸವ ಕಾರ್ಯಕ್ರಮಗಳನ್ನು ದೇಶಾದ್ಯಂತ ಅರ್ಥಪೂರ್ಣವಾಗಿ ಆಯೋಜಿಸುವ ಕುರಿತು ಚರ್ಚಿಸಲಾಯಿತು ಎಂದು ಸುನೀಲ್ ಅಂಬೇಕರ್ ಮಾಹಿತಿ ನೀಡಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !