July 12, 2026
Sunday, July 12, 2026
spot_img

ಬೆಳಗಾವಿಯಲ್ಲಿ ಮಳೆ ಕೊರತೆ ಆತಂಕ: ಸಮೀಕ್ಷೆ ಬಳಿಕ ರೈತರಿಗೆ ಸೂಕ್ತ ಪರಿಹಾರ; ಸಚಿವ ಸತೀಶ್ ಜಾರಕಿಹೋಳಿ

ಹೊಸದಿಗಂತ ವರದಿ ಬೆಳಗಾವಿ

​ಬೆಳಗಾವಿ : ಮಳೆ ಕೊರತೆಯಿಂದಾಗಿ ಜಿಲ್ಲೆಯ ಕೆಲವೆಡೆ ಬೆಳೆ ಹಾನಿಯಾಗಿದ್ದು, ಈ ಕುರಿತು ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ ವರದಿ ನೀಡಿದ ಬಳಿಕ ಪರಿಹಾರ ವಿತರಣೆ ಸೇರಿದಂತೆ ರೈತರ ಹಿತರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೋಳಿ ಭರವಸೆ ನೀಡಿದರು.

​ಭಾನುವಾರ ಚಿಕ್ಕೋಡಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ  ಮಾತನಾಡಿದ ಅವರು, ರಾಜ್ಯದ ಇತರೆ ಭಾಗಗಳಿಗೆ ಹೋಲಿಸಿದರೆ ಚಿಕ್ಕೋಡಿ ಉಪವಿಭಾಗದಲ್ಲಿ ಈ ಬಾರಿ ಮಳೆಯ ಪ್ರಮಾಣ ಕೊಂಚ ಕಡಿಮೆಯಾಗಿದೆ. ಆದಾಗ್ಯೂ, ಸದ್ಯಕ್ಕೆ ಎಲ್ಲೂ ಕುಡಿಯುವ ನೀರಿನ ಸಮಸ್ಯೆ ತಲೆದೋರಿಲ್ಲ. ಮುಂಬರುವ ದಿನಗಳಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯಿದೆ ಎಂದರು.

​ಜಿಲ್ಲೆಗಳ ಪುನರ್‌ರಚನೆ ಚರ್ಚೆಯಲ್ಲಿದೆ

​ಚಿಕ್ಕೋಡಿಯನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಘೋಷಿಸಬೇಕು ಎನ್ನುವ ದೀರ್ಘಕಾಲದ ಬೇಡಿಕೆಯ ಕುರಿತು ಉತ್ತರಿಸಿದ ಸಚಿವರು, “ರಾಜ್ಯದಲ್ಲಿ ಆಡಳಿತಾತ್ಮಕ ಸುಧಾರಣೆ ಹಾಗೂ ಜಿಲ್ಲೆಗಳ ಪುನರ್‌ರಚನೆ ಕುರಿತು ಸರ್ಕಾರದ ಮಟ್ಟದಲ್ಲಿ ಗಂಭೀರ ಚಿಂತನೆ ನಡೆಯುತ್ತಿದೆ. ಇದರಲ್ಲಿ ಚಿಕ್ಕೋಡಿ ಪ್ರತ್ಯೇಕ ಜಿಲ್ಲೆ ಮಾಡುವ ಪ್ರಸ್ತಾಪವೂ ಒಳಗೊಂಡಿದೆ. ಸೂಕ್ತ ಸಮಯದಲ್ಲಿ ಸರ್ಕಾರ ಈ ಬಗ್ಗೆ ಸೂಕ್ತ ನಿರ್ಧಾರ ಪ್ರಕಟಿಸಲಿದೆ” ಎಂದು ಸ್ಪಷ್ಟಪಡಿಸಿದರು.

​ರಾಜಕೀಯ ವಿದ್ಯಮಾನಗಳಿಗೆ ಪ್ರತಿಕ್ರಿಯೆ ನಿರಾಕರಣೆ

ಬೆಳಗಾವಿಯಲ್ಲಿ ಆಯೋಜನೆಗೊಂಡಿರುವ ಆರ್‌ಎಸ್‌ಎಸ್ ಪ್ರಮುಖರ ಸಭೆ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರ ಇತ್ತೀಚಿನ ಹೇಳಿಕೆಗಳ ಕುರಿತು ಪ್ರತಿಕ್ರಿಯಿಸಲು ಸಚಿವರು ನಿರಾಕರಿಸಿದರು. “ಆ ವಿಷಯಗಳ ಬಗ್ಗೆ ನನಗೆ ಯಾವುದೇ ನಿಖರ ಮಾಹಿತಿ ಇಲ್ಲ. ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕಷ್ಟೆ” ಎಂದು ಜಾರಿಕೊಂಡರು.

ಇದನ್ನೂ ಓದಿ:

​ಗಾಯಕಿ ಎಸ್. ಜಾನಕಿ ನಿಧನಕ್ಕೆ ಸಂತಾಪ

​ಇದೇ ವೇಳೆ ಹಿರಿಯ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅವರ ನಿಧನಕ್ಕೆ ತೀವ್ರ ಕರಳು  ಬ್ಲಾಕಿಂಗ್ ಸಂತಾಪ ಸೂಚಿಸಿದ ಸಚಿವರು, “ಜಾನಕಿ ಅವರು ಭಾರತೀಯ ಚಿತ್ರರಂಗದ ಶ್ರೇಷ್ಠ ಗಾಯಕಿ. ಅವರ ಅಗಲಿಕೆ ಕರ್ನಾಟಕ ಸೇರಿದಂತೆ ಇಡೀ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ” ಎಂದು ಕಂಬನಿ ಮಿಡಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !