July 13, 2026
Monday, July 13, 2026
spot_img

ಅಯೋಧ್ಯೆ ರಾಮಮಂದಿರ ದೇಣಿಗೆ ಹಗರಣ: ಇಂದು ಸುಪ್ರೀಂ ಕೋರ್ಟ್‌ನಲ್ಲಿ ಮಹತ್ವದ ವಿಚಾರಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಯೋಧ್ಯೆ ರಾಮಮಂದಿರದ ದೇಣಿಗೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ಕುರಿತು ಸ್ವತಂತ್ರ ನ್ಯಾಯಾಂಗ ತನಿಖೆ ನಡೆಸಬೇಕೆಂದು ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ಪೀಠ ಇಂದು ಕೈಗೆತ್ತಿಕೊಳ್ಳಲಿದೆ.

ಸರ್ಕಾರದ ಹಸ್ತಕ್ಷೇಪವಿಲ್ಲ: ನೃಪೇಂದ್ರ ಮಿಶ್ರಾ

ಇದೇ ವೇಳೆ ಮಂದಿರ ನಿರ್ಮಾಣ ಸಮಿತಿಯ ಮುಖ್ಯಸ್ಥ ನೃಪೇಂದ್ರ ಮಿಶ್ರಾ ಮಾತನಾಡಿ, “ಹೊಸ ಸಿಇಓ ಅವರ ಅಧಿಕಾರ ವ್ಯಾಪ್ತಿಯನ್ನು ರಾಮಮಂದಿರ ಟ್ರಸ್ಟ್ ನಿರ್ಧರಿಸುತ್ತದೆಯೇ ವಿನಃ ಸರ್ಕಾರವಲ್ಲ. ಹಣಕಾಸು ನಿರ್ವಹಣೆ ಹಾಗೂ ಭಕ್ತರ ವಿಶ್ವಾಸ ರಕ್ಷಣೆ ಸಿಇಓ ಅವರ ಹೊಣೆಯಾಗಿದ್ದು, ಇದರಲ್ಲಿ ಸರ್ಕಾರದ ಹಸ್ತಕ್ಷೇಪ ಇರುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ. ಜುಲೈ 22 ರಂದು ನಡೆಯಲಿರುವ ಉನ್ನತ ಮಟ್ಟದ ಸಭೆಯಲ್ಲಿ ಸಿಇಓ ನೇಮಕಾತಿ ಅಂತಿಮವಾಗಲಿದೆ.

ರಾಜಕೀಯ ಕೆಸರೆರಚಾಟ: ಕಾಂಗ್ರೆಸ್, ಆಪ್ ಆಕ್ರೋಶ

ರಾಮಮಂದಿರ ಹಗರಣದ ವಿಚಾರವಾಗಿ ಕೇಂದ್ರದ ವಿರುದ್ಧ ವಿಪಕ್ಷಗಳು ಮುಗಿಬಿದ್ದಿವೆ. ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, “ಈ ಬೃಹತ್ ಹಗರಣದಲ್ಲಿ ಕೇವಲ ತಳಮಟ್ಟದ ನೌಕರರು ಮಾತ್ರ ಭಾಗಿಯಾಗಲು ಸಾಧ್ಯವಿಲ್ಲ. ನೈಜ ಆರೋಪಿಗಳನ್ನು ರಕ್ಷಿಸಲಾಗುತ್ತಿದೆ” ಎಂದು ಆರೋಪಿಸಿ, ಪ್ರಧಾನಿ ಮೋದಿಯವರ ಮೌನವನ್ನು ಪ್ರಶ್ನಿಸಿದ್ದಾರೆ. ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ಕೂಡ ಇಡೀ ವ್ಯವಸ್ಥೆಯೇ ಭ್ರಷ್ಟರ ರಕ್ಷಣೆಗೆ ನಿಂತಿದೆ ಎಂದು ಕಿಡಿಕಾರಿದ್ದಾರೆ.

ಬದರಿನಾಥದಲ್ಲೂ ತನಿಖಾಸ್ತ್ರ!

ಮತ್ತೊಂದೆಡೆ, ಉತ್ತರಾಖಂಡದ ಪ್ರಸಿದ್ಧ ಬದರಿನಾಥ ದೇವಾಲಯದ ದೇಣಿಗೆಯಲ್ಲೂ ಅಕ್ರಮ ನಡೆದಿರುವ ಆರೋಪ ಕೇಳಿಬಂದಿದ್ದು, ತಪ್ಪಿತಸ್ಥರ ವಿರುದ್ಧ ತಕ್ಷಣವೇ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರು ದೇಗುಲದ ಸಿಇಓಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !