July 13, 2026
Monday, July 13, 2026
spot_img

ಕಾಶಿ, ಮಥುರಾ, ಸಂಭಾಲ್ ಕೇಸ್‌ಗಳಿಗೆ ‘ಸುಪ್ರೀಂ’ ನೋಟಿಸ್: ಕೋರ್ಟ್ ಅಂಗಳದಲ್ಲೇ ಶಾಂತಿಯುತ ಇತ್ಯರ್ಥಕ್ಕೆ ಮುನ್ನುಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ಸಾಮಾಜಿಕ ಮತ್ತು ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವ ವಾರಾಣಸಿಯ ಜ್ಞಾನವಾಪಿ, ಮಥುರಾದ ಶ್ರೀಕೃಷ್ಣ ಜನ್ಮಭೂಮಿ ಹಾಗೂ ಸಂಭಾಲ್‌ನ ಹರಿಹರ ಮಂದಿರ-ಜಾಮಾ ಮಸೀದಿ ವಿವಾದಗಳಿಗೆ ಸುಪ್ರೀಂಕೋರ್ಟ್ ಕೋರ್ಟ್ ಕೊಠಡಿಯ ಹೊರಗೆ ಶಾಂತಿಯುತ ಪರಿಹಾರ ಕಂಡುಕೊಳ್ಳಲು ಮುಂದಾಗಿದೆ. ಇದಕ್ಕಾಗಿ ಸರ್ವೋಚ್ಚ ನ್ಯಾಯಾಲಯದ ಆವರಣದಲ್ಲಿ ವಿಶೇಷ ‘ಲೋಕ ಅದಾಲತ್’ ಆಯೋಜಿಸಲಾಗಿದೆ.

ಆಗಸ್ಟ್‌ನಲ್ಲಿ ‘ಸಮಾಧಾನ್ ಸಮರೋಹ್’

ವರ್ಷಗಟ್ಟಲೆ ಎಳೆಯುವ ಕಾನೂನು ಹೋರಾಟಕ್ಕೆ ಬ್ರೇಕ್ ಹಾಕಿ, ಸೌಹಾರ್ದಯುತ ಒಮ್ಮತಕ್ಕೆ ಬರಲು “ಸಮಾಧಾನ್ ಸಮರೋಹ್” ಹೆಸರಿನಡಿ ಆಗಸ್ಟ್ 21 ರಿಂದ 23 ರವರೆಗೆ ಈ ವಿಶೇಷ ಸಂಧಾನ ಪ್ರಕ್ರಿಯೆ ನಡೆಯಲಿದೆ. ಈ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ಹಿಂದೂ ಮತ್ತು ಮುಸ್ಲಿಂ ಎರಡೂ ಜಂಟಿ ಪಕ್ಷಗಳಿಗೆ ಅಧಿಕೃತ ನೋಟಿಸ್ ಜಾರಿ ಮಾಡಿದೆ. ಕೆಳ ನ್ಯಾಯಾಲಯಗಳ ಮಟ್ಟದಲ್ಲಿ ಕಳೆದ ಏಪ್ರಿಲ್ 21 ರಿಂದಲೇ ತಜ್ಞರ ನೇತೃತ್ವದಲ್ಲಿ ಸಂಧಾನದ ಪ್ರಯತ್ನಗಳು ಚಾಲ್ತಿಯಲ್ಲಿವೆ.

ಪೂರ್ವ-ಸಂಧಾನ ವಿಚಾರಣೆ ಯಾವಾಗ?

ಮುಖ್ಯ ಕಾರ್ಯಕ್ರಮಕ್ಕೂ ಮುನ್ನ, ಜುಲೈ 14 ರಂದು ವಾರಾಣಸಿಯಲ್ಲಿ ಜ್ಞಾನವಾಪಿ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಪೂರ್ವ-ಸಂಧಾನ ವಿಚಾರಣೆ’ ನಡೆಯಲಿದೆ. ಮಥುರಾ ವಿವಾದಕ್ಕೆ ಸಂಬಂಧಿಸಿ ಜುಲೈ 5 ರಂದು ನಡೆದಿದ್ದ ಮೊದಲ ಸಂಧಾನ ಯತ್ನ ವಿಫಲವಾಗಿದ್ದರಿಂದ, ಸುಪ್ರೀಂಕೋರ್ಟ್ ಈಗ ಇದನ್ನು ದೇಶದ ಅತ್ಯುನ್ನತ ಲೋಕ ಅದಾಲತ್ ವ್ಯಾಪ್ತಿಗೆ ತಂದು ಮತ್ತೊಂದು ಗಂಭೀರ ಅವಕಾಶ ನೀಡಿದೆ.

ಏನಿದು ವಿವಾದ?

ಮೊಘಲರ ಕಾಲದಲ್ಲಿ ಮೂಲ ಕಾಶಿ ವಿಶ್ವನಾಥ ದೇವಾಲಯದ ಭಾಗವನ್ನು ಕೆಡವಿ ಜ್ಞಾನವಾಪಿ ಮಸೀದಿ ನಿರ್ಮಿಸಲಾಗಿದೆ, ಹಾಗಾಗಿ ಅಲ್ಲಿ ಪೂಜೆ ಮಾಡಲು ಅವಕಾಶ ನೀಡಬೇಕು ಎಂಬುದು ಹಿಂದೂಗಳ ವಾದ. ಆದರೆ, 1991ರ ಪೂಜಾ ಸ್ಥಳಗಳ ಕಾಯ್ದೆಯನ್ವಯ ಆಗಸ್ಟ್ 15, 1947 ರಲ್ಲಿದ್ದ ಧಾರ್ಮಿಕ ಸ್ವರೂಪವನ್ನು ಬದಲಾಯಿಸುವಂತಿಲ್ಲ ಎಂದು ಮುಸ್ಲಿಂ ಪರ ಅಂಜುಮನ್ ಇಂತೇಜಾಮಿಯಾ ಸಮಿತಿ ವಾದಿಸುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !