July 13, 2026
Monday, July 13, 2026
spot_img

ಬ್ಯಾಂಕಾಕ್ ನೈಟ್‌ಕ್ಲಬ್‌ನಲ್ಲಿ ಅಗ್ನಿ ದುರಂತ: ಹೊಗೆಗೆ ಉಸಿರುಗಟ್ಟಿ 27 ಮಂದಿ ದುರ್ಮ*ರಣ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್‌ನ ಪ್ರಸಿದ್ಧ ನೈಟ್‌ಕ್ಲಬ್ ಒಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಕನಿಷ್ಠ 27 ಜನರು ಸಾವನ್ನಪ್ಪಿದ್ದಾರೆ. ಚತುಚಕ್ ಜಿಲ್ಲೆಯ ‘ನಾ ಲಾಡ್‌ಪ್ರಾವ್’ ಪಬ್‌ನಲ್ಲಿ ಮಧ್ಯರಾತ್ರಿ ಪಾರ್ಟಿ ನಡೆಯುತ್ತಿದ್ದಾಗ ಈ ಕರಾಳ ಘಟನೆ ನಡೆದಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಹಠಾತ್ ಕಾಣಿಸಿಕೊಂಡ ಬೆಂಕಿ ಇಡೀ ಕಟ್ಟಡವನ್ನು ಕ್ಷಣಾರ್ಧದಲ್ಲಿ ಆವರಿಸಿಕೊಂಡಿದೆ. ಪ್ರಾಣ ಉಳಿಸಿಕೊಳ್ಳಲು ಯುವಕ-ಯುವತಿಯರು ದಿಕ್ಕಾಪಾಲಾಗಿ ಓಡುತ್ತಿರುವ ಭೀಕರ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಶೌಚಾಲಯದಲ್ಲೇ ಉಸಿರುಗಟ್ಟಿ ಸಾವು

ವೇದಿಕೆಯ ಪಕ್ಕದ ಮೇನ್ ಸರ್ಕ್ಯೂಟ್ ಬ್ರೇಕರ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ, ದೊಡ್ಡ ಸ್ಫೋಟದೊಂದಿಗೆ ಇಡೀ ಪಬ್‌ನ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು ಎಂದು ಅಲ್ಲಿನ ಗಾಯಕರೊಬ್ಬರು ತಿಳಿಸಿದ್ದಾರೆ. ದಟ್ಟವಾದ ಕಪ್ಪು ಹೊಗೆಯಿಂದಾಗಿ ಗ್ರಾಹಕರು ದಾರಿ ತಿಳಿಯದೆ ಪಬ್‌ನ ಹಿಂಭಾಗದ ಶೌಚಾಲಯ ಮತ್ತು ಸ್ನಾನಗೃಹಗಳ ಒಳಗೆ ನುಗ್ಗಿ ಬಾಗಿಲು ಹಾಕಿಕೊಂಡಿದ್ದಾರೆ. ಆದರೆ, ಅಲ್ಲಿಗೂ ವಿಷಕಾರಿ ಹೊಗೆ ಆವರಿಸಿದ್ದರಿಂದ ಬಹುತೇಕರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಥಾಯ್ ಪ್ರಧಾನಿ ಅನುಟಿನ್ ಚಾರ್ನ್‌ವಿರಕುಲ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

30 ನಿಮಿಷಗಳಲ್ಲೇ ಭಸ್ಮ

ಮಧ್ಯರಾತ್ರಿ 12 ಗಂಟೆಗೆ ಮಾಹಿತಿ ಸಿಗುತ್ತಿದ್ದಂತೆಯೇ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿದೆ. ಕೇವಲ 30 ನಿಮಿಷಗಳಲ್ಲಿ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರಾದರೂ, ಅಷ್ಟರಲ್ಲಾಗಲೇ ಇಡೀ ಪಬ್ ಸುಟ್ಟು ಕರಕಲಾಗಿತ್ತು ಮತ್ತು 27 ಜೀವಗಳು ಬಲಿಯಾಗಿದ್ದವು. ಪೊಲೀಸರು ಘಟನೆಯ ತನಿಖೆ ಚುರುಕುಗೊಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !