ಹೊಸದಿಗಂತ ಡಿಜಿಟಲ್ ಡೆಸ್ಕ್:
ಮದುವೆ ಸಮಾರಂಭ ಮುಗಿಸಿಕೊಂಡು ಖುಷಿಯಿಂದ ಮನೆಗೆ ಮರಳುತ್ತಿದ್ದ ಅತಿಥಿಗಳ ಪಾಲಿಗೆ ಹೆದ್ದಾರಿಯೇ ಮೃತ್ಯುಕೂಪವಾಗಿ ಮಾರ್ಪಟ್ಟಿದೆ. ಇಂಡೋನೇಷ್ಯಾದ ಜಾವಾ ದ್ವೀಪದ ಜನನಿಬಿಡ ಉತ್ತರ ಕರಾವಳಿ ಹೆದ್ದಾರಿಯಲ್ಲಿ ಸಂಭವಿಸಿದ ತ್ರಿವಳಿ ವಾಹನಗಳ ಅಪಘಾತದಲ್ಲಿ 13 ಜನರು ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ. ಎರಡು ಬೃಹತ್ ಟ್ರಕ್‌ಗಳ ಮಧ್ಯೆ ಸಿಲುಕಿದ ಪಿಕಪ್ ವ್ಯಾನ್ ಸಂಪೂರ್ಣ ನಜ್ಜುಗುಜ್ಜಾಗಿದೆ.
ಯು-ಟರ್ನ್ ತಂದ ತಲ್ಲಣ
ಇಂದ್ರಮಾಯು ರೀಜೆನ್ಸಿಯ ಕಿಯಾಜರನ್ ಕುಲೋನ್ ಗ್ರಾಮದ ಬಳಿ ಈ ದುರಂತ ನಡೆದಿದೆ. ಮೃತರಲ್ಲರೂ ನೆರೆಯ ಪರೇನ್ ಗ್ರಾಮದ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮೂರಿಗೆ ಮರಳುತ್ತಿದ್ದರು. ಸ್ಥಳೀಯ ಪೊಲೀಸ್ ಅಧಿಕಾರಿ ಉಂಡಾಂಗ್ ಸಯಾರಿಫ್ ಹಿದಾಯತ್ ನೀಡಿರುವ ಮಾಹಿತಿ ಪ್ರಕಾರ, ಸಂತ್ರಸ್ತರು ತೆರೆದ ಪಿಕಪ್ ವ್ಯಾನ್‌ನ ಹಿಂಭಾಗದಲ್ಲಿ ಕುಳಿತು ಪ್ರಯಾಣಿಸುತ್ತಿದ್ದರು. ಹೆದ್ದಾರಿಯ ಕಟಿಂಗ್ ಬಳಿ ಚಾಲಕ ಯು-ಟರ್ನ್ ತೆಗೆದುಕೊಳ್ಳಲು ವಾಹನವನ್ನು ನಿಧಾನಗೊಳಿಸಿದಾಗ, ಹಿಂದಿನಿಂದ ಅತಿ ವೇಗವಾಗಿ ಬಂದ ವಿಂಗ್-ಬಾಕ್ಸ್ ಲಾರಿಯೊಂದು ರಭಸವಾಗಿ ಡಿಕ್ಕಿ ಹೊಡೆದಿದೆ.
ಎರಡು ಲಾರಿಗಳ ಮಧ್ಯೆ ನಜ್ಜುಗುಜ್ಜಾದ ವ್ಯಾನ್
ಮೊದಲ ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಪಿಕಪ್ ವ್ಯಾನ್ ನಿಯಂತ್ರಣ ಕಳೆದುಕೊಂಡು, ಡಿವೈಡರ್ ದಾಟಿ ವಿರುದ್ಧ ದಿಕ್ಕಿನ ರಸ್ತೆಗೆ ತೂರಿ ಹೋಗಿದೆ. ದುರಾದೃಷ್ಟವಶಾತ್, ಅದೇ ಸಮಯದಲ್ಲಿ ಎದುರುಗಡೆಯಿಂದ ಬಂದ ಮತ್ತೊಂದು ಲಾರಿ ವ್ಯಾನ್‌ಗೆ ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದೆ.
ಎರಡೂ ಬದಿಗಳಿಂದ ಬಿದ್ದ ಭೀಕರ ಹೊಡೆತಕ್ಕೆ ವ್ಯಾನ್‌ನಲ್ಲಿದ್ದ ಪ್ರಯಾಣಿಕರು ರಸ್ತೆಯ ಮೇಲೆ ಸೀದಾ ಬಿದ್ದಿದ್ದಾರೆ. ತಲೆ ಮತ್ತು ದೇಹಕ್ಕೆ ತೀವ್ರ ಗಾಯಗಳಾಗಿದ್ದರಿಂದ 13 ಜನರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಸದ್ಯ ಅಪಘಾತದಲ್ಲಿ ಬದುಕುಳಿದ ಐವರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.



