September 2, 2026
Wednesday, September 2, 2026
spot_img

ಎತ್ತಿನಹೊಳೆ ಪೈಪ್‌ಲೈನ್‌ ಸ್ಫೋಟವಾಗಿ ಮುಗಿಲೆತ್ತರಕ್ಕೆ ಚಿಮ್ಮಿದ ನೀರು, ಸುತ್ತಮುತ್ತ ಬೆಳೆ ಹಾನಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಎತ್ತಿನಹೊಳೆ ಯೋಜನೆಯ ಪೈಪ್‌ಲೈನ್‌ ಸ್ಫೋಟಗೊಂಡ ಪರಿಣಾಮ ನೀರು ಮುಗಿಲೆತ್ತರಕ್ಕೆ ಚಿಮ್ಮಿದ ಘಟನೆ ಸಕಲೇಶಪುರದ ಹಲಸುಲಿಗೆ ಗ್ರಾಮದ ಬಳಿ ನಡೆದಿದೆ.

ಪೈಪ್‌ಲೈನ್‌ ಒಡೆಯುವಾಗ ಭಾರೀ ಶಬ್ದವಾಗಿದ್ದು, ಜನ ಹೆದರಿದ್ದಾರೆ. ಕೆಲಸಮಯದ ನಂತರ ನೀರು ಕಾಣಿಸಿದೆ. ಸದ್ಯ ಅಪಾಯ ಪ್ರಮಾಣದ ನೀರು ಪೋಲಾಗಿದ್ದು, ಸುತ್ತಮುತ್ತಲಿನ ಕೃಷಿ ಜಮೀನುಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿದೆ.

ತಮ್ಮ ಜಮೀನುಗಳಿಗೆ ನೀರು ನುಗ್ಗಿ ಹಾನಿಯಾಗುತ್ತಿರುವುದನ್ನು ಕಂಡು ರೈತರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಯೋಜನೆ ಪೂರ್ಣಗೊಂಡು ನೀರು ಹರಿಸುವ ಮುನ್ನವೇ ಪೈಪ್‌ಲೈನ್‌ಗಳು ಒಡೆಯುತ್ತಿರುವುದರಿಂದ, ಕಾಮಗಾರಿಯ ಗುಣಮಟ್ಟದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸ್ಫೋಟಕ್ಕೆ ನಿಖರ ಕಾರಣ ಏನು ಎಂಬುದು ಅಧಿಕಾರಿಗಳ ಪರಿಶೀಲನೆಯ ಬಳಿಕ ತಿಳಿಯಬೇಕಿದೆ.

2014ರಲ್ಲಿ 12,000 ಕೋಟಿ ರೂ. ವೆಚ್ಚದಲ್ಲಿ ಆರಂಭಗೊಂಡ ಯೋಜನೆಯ ಮೊತ್ತ ಇದೀಗ 23 ಸಾವಿರ ಕೋಟಿಗೆ ಏರಿಕೆಯಾಗಿದೆ. ಬಯಲುಸೀಮೆ ಜಿಲ್ಲೆಗಳಾದ ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಎತ್ತಿನಹೊಳೆ ಯೋಜನೆ ಮೊದಲ ಹಂತದ ನೀರೆತ್ತುವ ಯೋಜನೆ ಉದ್ಘಾಟನೆಗೊಂಡು 2 ವರ್ಷಗಳು ಕಳೆದರೂ ಯಾವ ಜಿಲ್ಲೆಗಳಿಗೂ ನೀರು ಹರಿಸಲು ಸಾಧ್ಯವಾಗಿಲ್ಲ. ಆದರೆ, ಪ್ರಾಯೋಗಿಕವಾಗಿ ನೀರು ಹರಿಸಲಾಗಿದ್ದು, ಆರಂಭದಲ್ಲೇ ನೀರಿನ ಒತ್ತಡ ತಡೆಯದೇ ಪೈಪ್‌ಲೈನ್‌ಗಳ ಜೋಡಣೆ ಕಿತ್ತು ಬರುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !