July 13, 2026
Monday, July 13, 2026
spot_img

ECB ಮಾಸ್ಟರ್ ಪ್ಲಾನ್: ಇಂಗ್ಲೆಂಡ್ ಕ್ರಿಕೆಟ್ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆಯಲಿದ್ದಾರಾ ದ್ರಾವಿಡ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ನ್ಯೂಝಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ 1-2 ಅಂತರದ ಹೀನಾಯ ಸೋಲು ಅನುಭವಿಸಿದ ಬೆನ್ನಲ್ಲೇ, ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) ಕಠಿಣ ನಿರ್ಧಾರ ಕೈಗೊಂಡಿದೆ. ಮುಖ್ಯ ಕೋಚ್ ಬ್ರೆಂಡನ್ ಮೆಕಲಮ್ ಅವರನ್ನು ಟೆಸ್ಟ್ ಕೋಚಿಂಗ್ ಜವಾಬ್ದಾರಿಯಿಂದ ಮುಕ್ತಗೊಳಿಸಲಾಗಿದೆ. ಸದ್ಯ ತೆರವಾಗಿರುವ ಈ ಪ್ರತಿಷ್ಠಿತ ಸ್ಥಾನಕ್ಕೆ ಭಾರತೀಯ ಕ್ರಿಕೆಟ್‌ನ ದಂತಕಥೆ, ‘ದಿ ವಾಲ್’ ಖ್ಯಾತಿಯ ರಾಹುಲ್ ದ್ರಾವಿಡ್ ಅವರ ಹೆಸರು ಬಲವಾಗಿ ಕೇಳಿಬರುತ್ತಿದೆ.

ಇಂಗ್ಲೆಂಡ್ ಮಂಡಳಿಯ ಶಾರ್ಟ್‌ಲಿಸ್ಟ್‌ನಲ್ಲಿ ಭಾರತೀಯ ಲೆಜೆಂಡ್!

ಬ್ರಿಟಿಷ್ ಪತ್ರಿಕೆ ‘ದಿ ಡೈಲಿ ಟೆಲಿಗ್ರಾಫ್’ ವರದಿಯ ಪ್ರಕಾರ, ಇಸಿಬಿ ಸಿದ್ಧಪಡಿಸಿರುವ ಸಂಭಾವ್ಯ ಕೋಚ್‌ಗಳ ಪಟ್ಟಿಯಲ್ಲಿ ರಾಹುಲ್ ದ್ರಾವಿಡ್ ಅವರ ಹೆಸರೇ ಮುಂಚೂಣಿಯಲ್ಲಿದೆ. ದ್ರಾವಿಡ್ ಅವರ ಶಿಸ್ತುಬದ್ಧ ನಡೆ, ತಾಂತ್ರಿಕ ಸಾಮರ್ಥ್ಯ ಹಾಗೂ ಯುವ ಪ್ರತಿಭೆಗಳನ್ನು ಬೆಳೆಸುವ ಕಲೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯನ್ನು ಬಹುವಾಗಿ ಆಕರ್ಷಿಸಿದೆ. ಈ ಹಿಂದೆ ಟೀಮ್ ಇಂಡಿಯಾವನ್ನು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್‌ಗೆ ಮುನ್ನಡೆಸಿದ ಅನುಭವ ಅವರಿಗಿದೆ.

ದ್ರಾವಿಡ್‌ಗೆ ಸೂಕ್ತವಾಗಲಿದೆಯೇ ಈ ಹೊಸ ಜವಾಬ್ದಾರಿ?

ಸದ್ಯಕ್ಕೆ ಪೂರ್ಣ ಪ್ರಮಾಣದ ಕೋಚಿಂಗ್ ಜವಾಬ್ದಾರಿಯಿಂದ ದೂರ ಉಳಿಯಲು ಬಯಸಿರುವ ದ್ರಾವಿಡ್ ಅವರಿಗೆ ಇಂಗ್ಲೆಂಡ್‌ನ ವಿಭಜಿತ ಕೋಚಿಂಗ್ ವ್ಯವಸ್ಥೆ (Split Coaching) ಪೂರಕವಾಗಬಹುದು. ಮೆಕಲಮ್ ಕೇವಲ ವೈಟ್-ಬಾಲ್ (ODI, T20) ತಂಡಕ್ಕೆ ಸೀಮಿತವಾಗಲಿದ್ದು, ದ್ರಾವಿಡ್ ಕೇವಲ ಟೆಸ್ಟ್ ತಂಡದ ಜವಾಬ್ದಾರಿ ಹೊರಬೇಕಾಗುತ್ತದೆ. ಇದು ಅವರಿಗೆ ಕೆಲಸದ ಒತ್ತಡ ಕಡಿಮೆ ಮಾಡಿ, ನೆಚ್ಚಿನ ಸುದೀರ್ಘ ಮಾದರಿಯ ಕ್ರಿಕೆಟ್‌ಗೆ ಕೊಡುಗೆ ನೀಡಲು ಉತ್ತಮ ಅವಕಾಶ ಕಲ್ಪಿಸಲಿದೆ. ಹೀಗಾಗಿ ದ್ರಾವಿಡ್ ಈ ಆಫರ್ ಒಪ್ಪುವ ಸಾಧ್ಯತೆ ದಟ್ಟವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !