November 4, 2026
Wednesday, November 4, 2026
spot_img

ಬಾಲಿವುಡ್‌ಗೆ ಬಿಷ್ಣೋಯ್ ಗ್ಯಾಂಗ್ ಭೀತಿ: ನಟ ಆಯುಷ್ಮಾನ್ ಖುರಾನಾಗೂ ಬಂತು ಜೀವ ಬೆದರಿಕೆ ಮೆಸೇಜ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ಅಂಗಳದಲ್ಲಿ ಗ್ಯಾಂಗ್‌ಸ್ಟರ್‌ಗಳ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಚಿತ್ರರಂಗದ ಪ್ರಮುಖ ನಟರಲ್ಲಿ ತೀವ್ರ ಆತಂಕ ಮೂಡಿಸಿದೆ. ಇತ್ತೀಚೆಗಷ್ಟೇ ಹಲವು ತಾರೆಯರಿಗೆ ಬೆದರಿಕೆ ಕರೆಗಳು ಬಂದಿದ್ದ ಬೆನ್ನಲ್ಲೇ, ಇದೀಗ ಖ್ಯಾತ ನಟ ಆಯುಷ್ಮಾನ್ ಖುರಾನಾ ಅವರಿಗೂ ಜೀವ ಬೆದರಿಕೆ ಬಂದಿರುವುದು ಚಿತ್ರರಂಗವನ್ನು ಬೆಚ್ಚಿಬೀಳಿಸಿದೆ.

ಕುಖ್ಯಾತ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನವರೆಂದು ಹೇಳಿಕೊಂಡ ವ್ಯಕ್ತಿಯೊಬ್ಬ ನಟ ಆಯುಷ್ಮಾನ್ ಖುರಾನಾ ಅವರಿಗೆ ಧ್ವನಿ ಸಂದೇಶ ಕಳುಹಿಸಿದ್ದಾನೆ. ಅದರಲ್ಲಿ ನಟನಿಗೆ ನೇರವಾಗಿ ಜೀವ ಬೆದರಿಕೆ ಒಡ್ಡಲಾಗಿದ್ದು, ಕೋಟಿ ಕೋಟಿ ರೂಪಾಯಿ ನೀಡುವಂತೆ ಬೇಡಿಕೆ ಇಡಲಾಗಿದೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಮುಂಬೈ ಪೊಲೀಸರು ತಕ್ಷಣವೇ ಕಾರ್ಯಾಚರಣೆಗೆ ಇಳಿದಿದ್ದು, ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ, ಆಯುಷ್ಮಾನ್ ಖುರಾನಾ ಅವರಿಗೆ ಬಂದಿರುವ ಆಡಿಯೋ ಕ್ಲಿಪ್ ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆದರೆ, ಪ್ರಾಥಮಿಕ ಪರಿಶೀಲನೆಯಲ್ಲಿ ಈ ಆಡಿಯೋ ಸಂದೇಶವು ನಕಲಿ ಇರಬಹುದು ಎಂದು ಶಂಕಿಸಲಾಗಿದೆ. ಆಡಿಯೋ ಕಳುಹಿಸಿದ ವ್ಯಕ್ತಿಗೆ ನಿಜವಾಗಿಯೂ ಬಿಷ್ಣೋಯ್ ಗ್ಯಾಂಗ್ ಜೊತೆ ಸಂಪರ್ಕವಿದೆಯೇ ಅಥವಾ ಕೇವಲ ಭಯ ಹುಟ್ಟಿಸಿ ಹಣ ಪಡೆಯಲು ಯಾರಾದರೂ ಹೀಗೆ ಮಾಡಿದ್ದಾರೆಯೇ ಎಂಬ ದಿಕ್ಕಿನಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿ, ‘ನಟ ಆಯುಷ್ಮಾನ್ ಖುರಾನಾಗೆ ಆಡಿಯೋ ಕರೆ ಬಂದಿರುವುದು ನಿಜ. ಪ್ರಸ್ತುತ ಧ್ವನಿ ಮಾದರಿಯನ್ನು ತನಿಖೆಗೆ ಒಳಪಡಿಸಲಾಗಿದೆ. ಈಗಾಗಲೇ ಪೊಲೀಸ್ ದಾಖಲೆಯಲ್ಲಿರುವ ಇತರ ಆರೋಪಿಗಳ ಧ್ವನಿಯೊಂದಿಗೆ ಇದನ್ನು ಹೋಲಿಸಿ ನೋಡಲಾಗುತ್ತಿದೆ’ ಎಂದು ತಿಳಿಸಿದ್ದಾರೆ. ಸದ್ಯಕ್ಕೆ ಈ ಘಟನೆಗೆ ಸಂಬಂಧಿಸಿದಂತೆ ಅಧಿಕೃತ ಎಫ್‌ಐಆರ್ ದಾಖಲಾಗಿಲ್ಲ.

Must Read

Skip to toolbar