ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅತ್ಯಂತ ಆಪ್ತ ಒಡನಾಡಿ ಹಾಗೂ ಹಿರಿಯ ರಿಪಬ್ಲಿಕನ್ ಸೆನೆಟರ್ ಲಿಂಡ್ಸೆ ಗ್ರಹಾಂ (71) ಅವರು ವಾಷಿಂಗ್ಟನ್‌ನ ತಮ್ಮ ನಿವಾಸದಲ್ಲಿ ಹಠಾತ್ ನಿಧನರಾಗಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ ಅವರು ಹೃದಯಸ್ತಂಭನದಿಂದ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದ್ದರೂ, ಅವರ ಸಾವು ಜಾಗತಿಕ ರಾಜಕೀಯ ವಲಯದಲ್ಲಿ ತಲ್ಲಣ ಹಾಗೂ ಹಲವು ಅನುಮಾನಗಳನ್ನು ಮೂಡಿಸಿದೆ.
ಉಕ್ರೇನ್ ಪ್ರವಾಸ ಮತ್ತು ಹತ್ಯೆಯ ಶಂಕೆ
ಲಿಂಡ್ಸೆ ಗ್ರಹಾಂ ಅವರು ಉಕ್ರೇನ್ ಪ್ರವಾಸ ಮುಗಿಸಿ ಅಮೆರಿಕಕ್ಕೆ ಮರಳಿದ ಕೆಲವೇ ಗಂಟೆಗಳಲ್ಲಿ ನಿಧನರಾಗಿದ್ದಾರೆ. ಸಾವಿಗೂ ಮುನ್ನವಷ್ಟೇ ಅವರು ಉಕ್ರೇನ್‌ನಲ್ಲಿ ರಷ್ಯಾದ ತೈಲ ಮತ್ತು ಅನಿಲ ರಫ್ತಿನ ಮೇಲೆ ಕಠಿಣ ಆರ್ಥಿಕ ನಿರ್ಬಂಧಗಳನ್ನು ಹೇರಬೇಕೆಂದು ಬಲವಾಗಿ ಒತ್ತಾಯಿಸಿದ್ದರು. ಈ ಭೇಟಿಯ ಬೆನ್ನಲ್ಲೇ ಅವರು ಸಾವನ್ನಪ್ಪಿರುವುದು ಟ್ರಂಪ್ ಅವರ ‘ಮಾಗಾ’ ಬೆಂಬಲಿಗರಲ್ಲಿ ಹತ್ಯೆಯ ಶಂಕೆ ಮೂಡಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇದರ ಹಿಂದೆ ರಷ್ಯಾ ಅಥವಾ ಇರಾನ್ ಕೈವಾಡವಿರಬಹುದು ಎಂಬ ಪಿತೂರಿ ಸಿದ್ಧಾಂತಗಳು ಹರಿದಾಡುತ್ತಿವೆ.
ಇರಾನ್ ಲಿಂಕ್ ಮತ್ತು ಟ್ರಂಪ್ ಸಂತಾಪ
ಇತ್ತೀಚೆಗಷ್ಟೇ ಇರಾನ್ ದೇಶವು ಲಿಂಡ್ಸೆ ಗ್ರಹಾಂ ಅವರಿಗೆ ಮುಕ್ತವಾಗಿ ಜೀವ ಬೆದರಿಕೆ ಹಾಕಿತ್ತು. ಅವರ ನಿಧನದ ಬೆನ್ನಲ್ಲೇ ಇರಾನ್ ಮಾಧ್ಯಮಗಳು ಈ ಸುದ್ದಿಯನ್ನು ಸಂಭ್ರಮದ ರೀತಿಯಲ್ಲಿ ಪ್ರಸಾರ ಮಾಡಿರುವುದು ಅನುಮಾನವನ್ನು ದುಪ್ಪಟ್ಟುಗೊಳಿಸಿದೆ. ತಮ್ಮ ಆತ್ಮೀಯ ಮಿತ್ರನ ಅಗಲಿಕೆಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀವ್ರ ಕಂಬನಿ ಮಿಡಿದಿದ್ದು, “ಲಿಂಡ್ಸೆ ಗ್ರಹಾಂ ಅವರು ಯಾವಾಗಲೂ ದೇಶಕ್ಕಾಗಿ ಶ್ರಮಿಸುತ್ತಿದ್ದ ನಿಜವಾದ ಅಮೆರಿಕನ್ ದೇಶಭಕ್ತ” ಎಂದು ಶ್ಲಾಘಿಸಿದ್ದಾರೆ. ಭದ್ರತಾ ಸಂಸ್ಥೆಗಳು ಈ ಸಾವಿನ ನಿಖರ ಕಾರಣಗಳ ತನಿಖೆ ನಡೆಸುತ್ತಿವೆ.



