ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತಮ ಭವಿಷ್ಯದ ಕನಸು ಹೊತ್ತು ನೇಪಾಳದ ಹೋಟೆಲ್‌ವೊಂದರಲ್ಲಿ ಕೆಲಸಕ್ಕೆ ಸೇರಿದ್ದ ಬೆಳಗಾವಿ ಜಿಲ್ಲೆಯ ಯುವಕನೊಬ್ಬ ಅಲ್ಲಿಯೇ ಬರ್ಬರವಾಗಿ ಕೊಲೆಯಾಗಿರುವ ಘಟನೆ ವರದಿಯಾಗಿದೆ. ಬೆಳಗಾವಿ ಜಿಲ್ಲೆಯ ಖಾನಾಪುರ ಪಟ್ಟಣದ ನಿವಾಸಿಯಾದ ಸಾಹಿಲ್ ರಿಯಾಜ್ ಅಹ್ಮದ್ ಮೋಮಿನ್ (25) ಕೊಲೆಯಾದ ದುರ್ದೈವಿ.
ರೂಮ್‌ಮೇಟ್‌ನಿಂದಲೇ ಸ್ಕೆಚ್:
ದುಡಿಮೆಗಾಗಿ ನೇಪಾಳಕ್ಕೆ ತೆರಳಿದ್ದ ಸಾಹಿಲ್, ಅಲ್ಲಿನ ಹೋಟೆಲ್ ಒಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ. ಆದರೆ, ದುರದೃಷ್ಟವಶಾತ್ ಆತ ತಂಗಿದ್ದ ಕೋಣೆಯಲ್ಲೇ ಆತನ ಜೊತೆಗಿದ್ದ ರೂಮ್‌ಮೇಟ್ ಅತಿ ಅಮಾನುಷವಾಗಿ ಸಾಹಿಲ್‌ನನ್ನು ಹತ್ಯೆ ಮಾಡಿದ್ದಾನೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಕೊಲೆಗೆ ನಿಖರ ಕಾರಣ ಏನೆಂಬುದು ಇನ್ನು ಪತ್ತೆಯಾಗಬೇಕಿದೆ.
ಮೃತದೇಹಕ್ಕಾಗಿ ಕುಟುಂಬಸ್ಥರ ಆಕ್ರಂದನ:
ಮಗನ ಅಕಾಲಿಕ ಮರಣದ ಸುದ್ದಿ ಕೇಳಿ ಖಾನಾಪುರದಲ್ಲಿರುವ ಕುಟುಂಬಸ್ಥರು ಹಾಗೂ ಸ್ಥಳೀಯರು ಕಣ್ಣೀರಿನ ಸಾಗರದಲ್ಲಿ ಮುಳುಗಿದ್ದಾರೆ. ಸದ್ಯ ಮಗನನ್ನು ಕಳೆದುಕೊಂಡು ಕಂಗಾಲಾಗಿರುವ ಪೋಷಕರು, ಸಾಹಿಲ್‌ನ ಮೃತದೇಹವನ್ನು ಭಾರತಕ್ಕೆ ಸುರಕ್ಷಿತವಾಗಿ ಮರಳಿ ತರಲು ನೆರವಾಗಬೇಕೆಂದು ಸರ್ಕಾರ ಹಾಗೂ ವಿದೇಶಾಂಗ ಇಲಾಖೆಗೆ ಮನವಿ ಮಾಡಿದ್ದಾರೆ.
ಸ್ಥಳೀಯ ಪೊಲೀಸರ ಮೂಲಕವೂ ಕುಟುಂಬದವರು ಪ್ರಯತ್ನ ಮುಂದುವರಿಸಿದ್ದು, ಸಂಬಂಧಪಟ್ಟ ಉನ್ನತ ಅಧಿಕಾರಿಗಳು ತಕ್ಷಣವೇ ಸ್ಪಂದಿಸಿ ಮೃತದೇಹವನ್ನು ತಾಯ್ನಾಡಿಗೆ ತರಲು ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.



