ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳದ ರಾಜಕೀಯ ವಲಯದಲ್ಲಿ ಈಗ ಕೊಲ್ಕತ್ತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತ ಹೊಸ ವಿವಾದವೊಂದು ಭುಗಿಲೆದ್ದಿದೆ. ಏರ್‌ಪೋರ್ಟ್ ಆವರಣದಲ್ಲಿರುವ ಐತಿಹಾಸಿಕ ಮಸೀದಿಗೆ ಹೊರಗಿನವರ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಸರ್ಕಾರದ ಈ ಕಠಿಣ ನಿಲುಕನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ತೀವ್ರವಾಗಿ ಸಮರ್ಥಿಸಿಕೊಂಡಿದ್ದಾರೆ.
ಪ್ರವೇಶ ನಿರ್ಬಂಧಕ್ಕೆ ಅಸಲಿ ಕಾರಣವೇನು?
ವಿಮಾನ ನಿಲ್ದಾಣದ ಅತ್ಯಂತ ಸೂಕ್ಷ್ಮ ವಲಯದ ಭದ್ರತೆಯನ್ನು ಕಾಪಾಡುವ ಉದ್ದೇಶದಿಂದ ಪ್ರಾಧಿಕಾರವು ಈ ಕ್ರಮ ಕೈಗೊಂಡಿದೆ. ರನ್‌ವೇಗೆ ತೀರಾ ಹತ್ತಿರದಲ್ಲಿರುವ, 136 ವರ್ಷಗಳಷ್ಟು ಹಳೆಯದಾದ ‘ಗೌರಿಪುರ ಜಾಮಾ ಮಸೀದಿ’ ಯಲ್ಲಿ ನವೀಕರಣ ಕಾರ್ಯದ ಹಿನ್ನೆಲೆಯಲ್ಲಿ ನಮಾಜ್ ಮಾಡುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಅಲ್ಲದೆ, ಸಾರ್ವಜನಿಕರಿಗೆ ನೀಡಲಾಗುತ್ತಿದ್ದ ಪ್ರವೇಶ ಪಾಸ್‌ಗಳನ್ನು ರದ್ದುಗೊಳಿಸಲಾಗಿದ್ದು, ಈ ಮಸೀದಿಯನ್ನು ಬೇರೆಡೆಗೆ ಶಿಫ್ಟ್ ಮಾಡಲು ಸರ್ಕಾರ ಮುಂದಾಗಿದೆ ಎನ್ನಲಾಗಿದೆ.
ವಿಮಾನಗಳ ಸಂಚಾರಕ್ಕೆ ಎದುರಾಗಿದ್ದ ಅಡ್ಡಿ!
ಮುಖ್ಯ ರನ್‌ವೇ ದುರಸ್ತಿಯಲ್ಲಿದ್ದಾಗ, ದೊಡ್ಡ ವಿಮಾನಗಳು ಎರಡನೇ ರನ್‌ವೇ ಬಳಸಲು ಈ ಮಸೀದಿಯ ಕಟ್ಟಡವು ತಾಂತ್ರಿಕ ಅಡಚಣೆಯುಂಟು ಮಾಡುತ್ತಿತ್ತು. ಇದರಿಂದಾಗಿ ಇನ್ಸ್ಟ್ರುಮೆಂಟ್ ಲ್ಯಾಂಡಿಂಗ್ ಸಿಸ್ಟಮ್ (ILS) ಅಳವಡಿಕೆ ಹಾಗೂ ರನ್‌ವೇ ವಿಸ್ತರಣಾ ಕಾಮಗಾರಿಗಳು ಸುದೀರ್ಘ ಕಾಲದಿಂದ ನೆನೆಗುದಿಗೆ ಬಿದ್ದಿದ್ದವು ಎಂದು ನಾಗರಿಕ ವಿಮಾನಯಾನ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.



