July 14, 2026
Tuesday, July 14, 2026
spot_img

ಫಿಫಾ ವಿಶ್ವಕಪ್ 2026: ಫೈನಲ್ ಪ್ರವೇಶಿಸಲು ಅರ್ಜೆಂಟೀನಾ-ಇಂಗ್ಲೆಂಡ್ ಬಿಗ್ ಫೈಟ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಫಿಫಾ ವಿಶ್ವಕಪ್ 2026ರ ಸೆಮಿಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗುತ್ತಿವೆ. ಫುಟ್‌ಬಾಲ್ ಇತಿಹಾಸದ ಅತ್ಯಂತ ರೋಚಕ ಪೈಪೋಟಿಗಳಲ್ಲಿ ಇದೂ ಒಂದು. ಫೈನಲ್‌ಗೆ ಹೋಗುವ ಗುರಿಯೊಂದಿಗೆ ಎರಡೂ ತಂಡಗಳು ಕಣಕ್ಕಿಳಿಯಲಿವೆ.

ಹಾಲಿ ಚಾಂಪಿಯನ್ ಅರ್ಜೆಂಟೀನಾ ತಂಡವು, ಸ್ವಿಜರ್ಲ್ಯಾಂಡ್ ಅನ್ನು ಸೋಲಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಮೆಸ್ಸಿ ನೇತೃತ್ವದ ಈ ತಂಡದ ಮಿಡ್‌ಫೀಲ್ಡ್ ವಿಭಾಗವು ಅಲೆಕ್ಸಿಸ್ ಮ್ಯಾಕ್ ಆಲಿಸ್ಟರ್, ಎಂಜೊ ಫರ್ನಾಂಡಿಸ್ ಮತ್ತು ರೊಡ್ರಿಗೊ ಡಿ ಪಾಲ್ ಅವರಂತಹ ಆಟಗಾರರಿಂದ ಬಲಿಷ್ಠವಾಗಿದೆ. ಇನ್ನೊಂದೆಡೆ, ಥಾಮಸ್ ಟುಚೆಲ್ ಅವರ ತರಬೇತಿಯಲ್ಲಿ ಇಂಗ್ಲೆಂಡ್ ತಂಡವು ಅದ್ಭುತವಾಗಿ ಆಡುತ್ತಿದೆ. ಜೂಡ್ ಬೆಲ್ಲಿಂಗ್ಹ್ಯಾಮ್ ಮತ್ತು ಹ್ಯಾರಿ ಕೇನ್ ಅವರ ನೇತೃತ್ವದಲ್ಲಿ, 1966ರ ನಂತರ ಮೊದಲ ಬಾರಿಗೆ ವಿಶ್ವಕಪ್ ಫೈನಲ್ ತಲುಪುವ ಗುರಿಯೊಂದಿಗೆ ಇಂಗ್ಲೆಂಡ್ ಕಣಕ್ಕಿಳಿಯಲಿದೆ.

ಈ ಪಂದ್ಯದ ಬಗ್ಗೆ ಫುಟ್‌ಬಾಲ್ ತಜ್ಞ ರಾಬಿ ಫೌಲರ್ ಹೀಗೆ ವಿಶ್ಲೇಷಿಸಿದ್ದಾರೆ: ಈ ಪಂದ್ಯ ಕೇವಲ ಫುಟ್‌ಬಾಲ್ ಆಟವಲ್ಲ, ಇದೊಂದು ದೊಡ್ಡ ಕದನ. ಎರಡು ದೇಶಗಳ ನಡುವಿನ ಹಳೆಯ ಇತಿಹಾಸ ಮತ್ತು ಒತ್ತಡದಿಂದಾಗಿ ಈ ಪಂದ್ಯಕ್ಕೆ ವಿಶೇಷ ಮಹತ್ವವಿದೆ. ಮರಡೋನಾ ಅವರ ಗೋಲ್, ಬೆಕ್‌ಹ್ಯಾಮ್‌ರ ಕೆಂಪು ಕಾರ್ಡ್ ಮತ್ತು ಫಾಕ್ಸ್‌ಲ್ಯಾಂಡ್ಸ್ ಸಂಘರ್ಷದಂತಹ ಘಟನೆಗಳು ಈ ಪಂದ್ಯವನ್ನು ಫುಟ್‌ಬಾಲ್ ಇತಿಹಾಸದಲ್ಲೇ ಅತ್ಯಂತ ರೋಚಕವನ್ನಾಗಿ ಮಾಡಿವೆ.

ಫೌಲರ್ ಪ್ರಕಾರ, ಮಿಡ್‌ಫೀಲ್ಡ್ ವಿಭಾಗದ ಆಟವೇ ಈ ಪಂದ್ಯದಲ್ಲಿ ನಿರ್ಣಾಯಕವಾಗಲಿದೆ. ಇಂಗ್ಲೆಂಡ್ ತಂಡವು ಚೆನ್ನಾಗಿ ಸಂಘಟಿತರಾಗಿ ಆಡಬೇಕು, ತುಂಬಾ ರಕ್ಷಣಾತ್ಮಕವಾಗಿ ಹಿಂದಕ್ಕೆ ಸರಿಯಬಾರದು. ಅರ್ಜೆಂಟೀನಾ ತಂಡವು ಮಿಡ್‌ಫೀಲ್ಡ್ ಮೂಲಕ ಚೆಂಡನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಂಡು ಒತ್ತಡ ಹೇರಲು ನೋಡುತ್ತದೆ. ಹಾಗಾಗಿ, ಇಂಗ್ಲೆಂಡ್ ಶಿಸ್ತಿನಿಂದ ಆಡುವುದು ಬಹಳ ಮುಖ್ಯ. ಅಂತಿಮವಾಗಿ, ರಕ್ಷಣಾತ್ಮಕ ಆಟವನ್ನು ಉಳಿಸಿಕೊಂಡು ಮಿಡ್‌ಫೀಲ್ಡ್‌ನಲ್ಲಿ ಮೇಲುಗೈ ಸಾಧಿಸುವ ತಂಡವೇ ಪಂದ್ಯವನ್ನು ಗೆಲ್ಲುತ್ತದೆ ಎಂದಿದ್ದಾರೆ.

ಅರ್ಜೆಂಟೀನಾ ಸತತ ಎರಡನೇ ಬಾರಿ ವಿಶ್ವಕಪ್ ಗೆಲ್ಲುವ ಗುರಿ ಹೊಂದಿದ್ದರೆ, ಇಂಗ್ಲೆಂಡ್ 60 ವರ್ಷಗಳ ನಂತರ ಫೈನಲ್ ತಲುಪಲು ಕಾಯುತ್ತಿದೆ. ಈ ಪಂದ್ಯದಲ್ಲಿ ತಾಳ್ಮೆ, ಆಟದ ಶಿಸ್ತು ಮತ್ತು ಮಿಡ್‌ಫೀಲ್ಡ್ ನಿಯಂತ್ರಣವೇ ಯಾವ ತಂಡ ಫೈನಲ್‌ಗೆ ಹೋಗುತ್ತದೆ ಎಂಬುದನ್ನು ನಿರ್ಧರಿಸುತ್ತದೆ.

ಫಿಫಾ ವಿಶ್ವಕಪ್ 2026 ಅನ್ನು ಹಿಂದಿ, ಇಂಗ್ಲಿಷ್, ಮಲಯಾಳಂ ಮತ್ತು ಬಂಗಾಳಿ ಭಾಷೆಗಳಲ್ಲಿ Zee5 ಆ್ಯಪ್‌ನಲ್ಲಿ ನೇರವಾಗಿ ವೀಕ್ಷಿಸಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !