July 14, 2026
Tuesday, July 14, 2026
spot_img

ಪೊಲೀಸರ ಮಿಂಚಿನ ಕಾರ್ಯಾಚರಣೆ: ನೀರು ಕೇಳುವ ನೆಪದಲ್ಲಿ ಸರ ಕದ್ದ ಖದೀಮರು 6 ಗಂಟೆಯಲ್ಲೇ ಲಾಕ್

ಹೊಸದಿಗಂತ ಶಿವಮೊಗ್ಗ:

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸೊನಲೆ ಗ್ರಾಮದಲ್ಲಿ ನಡೆದಿದ್ದ ಸರಗಳ್ಳತನ ಪ್ರಕರಣವನ್ನು ಹೊಸನಗರ ಪೊಲೀಸರು ಕೇವಲ ಆರೇ ಗಂಟೆಗಳಲ್ಲಿ ಭೇದಿಸಿ, ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಗಾಯತ್ರಿ ಎಂಬುವವರ ಮನೆಗೆ ನೀರು ಕೇಳುವ ನೆಪದಲ್ಲಿ ಬಂದ ಇಬ್ಬರು ಅಪರಿಚಿತರು, ಅವರ ಕತ್ತಿನಲ್ಲಿದ್ದ ಸುಮಾರು 13 ಗ್ರಾಂ ತೂಕದ ಚಿನ್ನದ ಸರವನ್ನು ಕಸಿದುಕೊಂಡು ಬೈಕ್‌ನಲ್ಲಿ ಪರಾರಿಯಾಗಿದ್ದರು.

ತಕ್ಷಣ ಕಾರ್ಯಪ್ರವೃತ್ತರಾದ ಹೊಸನಗರ ಪೊಲೀಸರು

ದರೋಡೆ ನಡೆದ ತಕ್ಷಣ ಸಂತ್ರಸ್ತ ಕುಟುಂಬವು ‘112’ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿತು. ಕೂಡಲೇ ಕಾರ್ಯಪ್ರವೃತ್ತರಾದ ಹೊಸನಗರ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ಗೌಡಪ್ಪ ಗೌಡರ್ ಹಾಗೂ ಸಬ್ ಇನ್ಸ್‌ಪೆಕ್ಟರ್ ಶಂಕರಗೌಡ ಪಾಟೀಲ್ ನೇತೃತ್ವದ ವಿಶೇಷ ತಂಡವು ತನಿಖೆ ಚುರುಕುಗೊಳಿಸಿತು. ಆರೋಪಿಗಳು ತಪ್ಪಿಸಿಕೊಂಡು ಹೋಗಿದ್ದ ಮಾರ್ಗವನ್ನು ಪತ್ತೆ ಹಚ್ಚಿದ ಪೊಲೀಸರು ತೀವ್ರ ಕಾರ್ಯಾಚರಣೆ ಆರಂಭಿಸಿದರು.

ನೂತನ ಕಟ್ಟಡದಲ್ಲಿ ಅವಿತಿದ್ದ ಆರೋಪಿಗಳ ಬಂಧನ

ಸೊನಲೆಯಿಂದ 7 ಕಿ.ಮೀ ದೂರವಿರುವ ತಟ್ಟಿಕೆರೆಯ ನಿರ್ಮಾಣ ಹಂತದ ಮನೆಯೊಂದರಲ್ಲಿ ಅವಿತಿದ್ದ ಆರೋಪಿಗಳನ್ನು ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಬಂಧಿತರನ್ನು ಉಡುಪಿಯ ಮಹಮ್ಮದ್ ಗೌಸಿಫ್ (33) ಹಾಗೂ ಮಂಗಳೂರಿನ ರೋಷನ್ (44) ಎಂದು ಗುರುತಿಸಲಾಗಿದೆ.

ಕೇವಲ ಆರು ಗಂಟೆಗಳ ದಾಖಲೆಯ ಅವಧಿಯಲ್ಲಿ ಆರೋಪಿಗಳನ್ನು ಸೆರೆಹಿಡಿದು, ಕಳವು ಮಾಡಿದ ಸ್ವತ್ತನ್ನು ಜಪ್ತಿ ಮಾಡಿದ ಹೊಸನಗರ ಪೊಲೀಸರ ಮಿಂಚಿನ ವೇಗದ ಕಾರ್ಯವೈಖರಿಗೆ ಸಾರ್ವಜನಿಕ ವಲಯದಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !