ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮ್ಮ ಪ್ರಸಿದ್ಧ ಯೂಟ್ಯೂಬ್ ಕಾರ್ಯಕ್ರಮವಾದ ‘ಇಂಡಿಯಾಸ್ ಗಾಟ್ ಲೇಟೆಂಟ್’ ಮೂಲಕ ವಿವಾದ ಸೃಷ್ಟಿಸಿದ್ದ ಹಾಸ್ಯನಟ ಸಮಯ್ ರೈನಾಗೆ ಸುಪ್ರೀಂ ಕೋರ್ಟ್ 3 ಲಕ್ಷ ರೂಪಾಯಿ ದಂಡ ವಿಧಿಸಿದೆ. ನ್ಯಾಯಾಲಯದ ನಿರ್ದೇಶನಗಳನ್ನು ಪಾಲಿಸದ ಮತ್ತು ಸುಳ್ಳು ಮಾಹಿತಿ ನೀಡಿದ ಕಾರಣಕ್ಕೆ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ಜಾಯ್‌ಮಲ್ಯ ಬಾಗ್ಚಿ ಹಾಗೂ ಜೆ.ವಿ. ಮೋಹನಾ ಅವರಿದ್ದ ನ್ಯಾಯಪೀಠವು ಈ ಕಠಿಣ ಆದೇಶ ನೀಡಿದೆ.
ವಿವಾದಕ್ಕೆ ಕಾರಣವೇನು?
ಸಮಯ್ ರೈನಾ ಅವರ ಶೋನ ಮೊದಲ ಸೀಸನ್‌ನಲ್ಲಿ ಸ್ಪೈನಲ್ ಮಸ್ಕುಲರ್ ಅಟ್ರೋಫಿ (SMA) ಎಂಬ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರನ್ನು ಅಣಕಿಸಲಾಗಿತ್ತು. ಇದನ್ನು ವಿರೋಧಿಸಿ ‘ಕ್ಯೂರ್ ಎಸ್‌ಎಂಎ ಇಂಡಿಯಾ ಫೌಂಡೇಶನ್’ ಕಾನೂನು ಹೋರಾಟ ನಡೆಸಿತ್ತು.
ನ್ಯಾಯಾಲಯದ ಆದೇಶ ಗಾಳಿಗೆ ತೂರಿದ ನಟ
ಈ ಹಿಂದೆ ಕೋರ್ಟ್, ಸಂತ್ರಸ್ತರ ನಿಧಿಗೆ ಹಣ ಸಂಗ್ರಹಿಸಲು ತಿಂಗಳಿಗೆ ಎರಡು ವಿಶೇಷ ಪ್ರದರ್ಶನಗಳನ್ನು ನಡೆಸುವಂತೆ ಹಾಗೂ ವಿಶೇಷ ಚೇತನರನ್ನು ಗೌರವಯುತವಾಗಿ ಕಾಣುವಂತೆ ಸಮಯ್ ರೈನಾಗೆ ಸೂಚಿಸಿತ್ತು. ಆದರೆ, ದೂರುದಾರರ ಪರ ವಕೀಲೆ ಅಪರಾಜಿತಾ ಸಿಂಗ್ ಅವರು, ರೈನಾ ಸರಣಿ ಶೋಗಳನ್ನು ನಡೆಸುತ್ತಿದ್ದರೂ ಕೋರ್ಟ್ ಆದೇಶದಂತೆ ಯಾವುದೇ ಸಹಾಯ ಹಸ್ತ ಚಾಚಿಲ್ಲ ಹಾಗೂ ಸಂತ್ರಸ್ತರನ್ನು ಸಂಪರ್ಕಿಸಿಲ್ಲ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಇದರಿಂದ ಕೋಪಗೊಂಡ ಸುಪ್ರೀಂ ಕೋರ್ಟ್, “ನೀವು ನ್ಯಾಯಾಲಯದ ದಾರಿತಪ್ಪಿಸಿದ್ದೀರಿ” ಎಂದು ತರಾಟೆಗೆ ತೆಗೆದುಕೊಂಡಿದೆ.



