ಹೊಸದಿಗಂತ ಕಲಬುರಗಿ:
ಕಲಬುರಗಿ ಕೇಂದ್ರ ಕಾರಾಗೃಹದ ಗೋಡೆ ಜಿಗಿದು ಪರಾರಿಯಾಗಿದ್ದ ಮೂವರು ಅಪಾಯಕಾರಿ ಖೈದಿಗಳ ಪೈಕಿ ಓರ್ವನನ್ನು ಕೊನೆಗೂ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಬಂಧಿತ ಆರೋಪಿಯನ್ನು ಸಂತೋಷ್ ಎಂದು ಗುರುತಿಸಲಾಗಿದ್ದು, ಈತನನ್ನು ಬೀದರ್ ಜಿಲ್ಲೆಯ ಹುಮನಾಬಾದ್ ಬಳಿ ಪೊಲೀಸರು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಸಾರಿಗೆ ಬಸ್‌ನಲ್ಲಿ ಸಿಕ್ಕಿಬಿದ್ದ ಆರೋಪಿ
ಜೈಲಿನಿಂದ ತಪ್ಪಿಸಿಕೊಂಡಿದ್ದ ಸಂತೋಷ್, ಕಲಬುರಗಿಯಿಂದ ಬೀದರ್ ಕಡೆಗೆ ಹೋಗುತ್ತಿದ್ದ ಕೆಎಸ್ಆರ್‌ಟಿಸಿ ಬಸ್ ಹತ್ತಿ ಎಸ್ಕೇಪ್ ಆಗಲು ಯತ್ನಿಸುತ್ತಿದ್ದ. ಆದರೆ ಖಚಿತ ಮಾಹಿತಿ ಮೇರೆಗೆ ಕಾರ್ಯಪ್ರವೃತ್ತರಾದ ಹುಮನಾಬಾದ್ ಪೊಲೀಸರು, ಆರ್‌ಟಿಓ ಸರ್ಕಲ್ ಬಳಿ ಬಸ್ ತಡೆದು ತಪಾಸಣೆ ನಡೆಸಿದಾಗ ಆರೋಪಿ ಸಿಕ್ಕಿಬಿದ್ದಿದ್ದಾನೆ. ಮೂಲತಃ ಸಂತಪುರ ಠಾಣಾ ವ್ಯಾಪ್ತಿಯ ಗಂಭೀರ ಪ್ರಕರಣವೊಂದರಲ್ಲಿ ಈತನಿಗೆ ಶಿಕ್ಷೆಯಾಗಿತ್ತು. ಪ್ರಸ್ತುತ ಬಂಧಿತನನ್ನು ಕಲಬುರಗಿ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.
ಇಬ್ಬರಿಗಾಗಿ ಮುಂದುವರಿದ ತಲಾಶ್
ಮಂಗಳವಾರ ಮಧ್ಯರಾತ್ರಿ ಜೈಲಿನಿಂದ ಮೂವರು ಜಾಣತನದಿಂದ ಪರಾರಿಯಾಗಿದ್ದು ಇಡೀ ರಾಜ್ಯದಲ್ಲೇ ಸಂಚಲನ ಸೃಷ್ಟಿಸಿತ್ತು. ಸದ್ಯ ಒಬ್ಬಾತ ಜೈಲು ಪಾಲಾಗಿದ್ದು, ಉಳಿದ ಇಬ್ಬರು ಜಾಣ ಆರೋಪಿಗಳ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.



