ಹೊಸದಿಗಂತ ಡಿಜಿಟಲ್ ಡೆಸ್ಕ್:
ಫುಟ್‌ಪಾತ್ ಒತ್ತುವರಿ ತೆರವು, ಅನಾಥ ವಾಹನಗಳ ತೆರವು ಕಾರ್ಯಾಚರಣೆ ಬೆನ್ನಲ್ಲೇ ಮತ್ತೊಂದು ಮಹತ್ವದ ಕಾರ್ಯಾಚರಣೆಗೆ ಬೆಂಗಳೂರು ಸಿದ್ಧವಾಗುತ್ತಿದೆ.
ಬೆಂಗಳೂರಿನಲ್ಲಿ ಆಗಸ್ಟ್ 1ರಿಂದ ಮಹತ್ವದ ಸ್ವಚ್ಛತಾ ಅಭಿಯಾನ ಆರಂಭಗೊಳ್ಳಲಿದೆ. ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಅವರು ಈ ಅಭಿಯಾನಕ್ಕೆ ಚಾಲನೆ ನೀಡಲಿದ್ದು, ನಗರದಾದ್ಯಂತ ಸ್ವಚ್ಛತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದ್ದಾರೆ. ವಿಶೇಷವಾಗಿ, ಕಸದಿಂದ ಕೂಡಿದ ಖಾಲಿ ನಿವೇಶನಗಳ ಮಾಲೀಕರಿಗೆ ಈ ಅಭಿಯಾನವು ನೇರವಾಗಿ ಅನ್ವಯಿಸುತ್ತದೆ. ಆಗಸ್ಟ್ 15ರೊಳಗೆ ತಮ್ಮ ಖಾಲಿ ಸೈಟ್‌ಗಳನ್ನು ಸ್ವಚ್ಛಗೊಳಿಸಲು ಮಾಲೀಕರಿಗೆ ಕಾಲಾವಕಾಶ ನೀಡಲಾಗಿದೆ.
ಈ ಅವಧಿಯೊಳಗೆ ಸ್ವಚ್ಛಗೊಳಿಸದಿದ್ದರೆ, ಆಗಸ್ಟ್ 15ರ ನಂತರ ನಗರಾಡಳಿತವೇ ಆ ಜಾಗಗಳನ್ನು ಸ್ವಚ್ಛಗೊಳಿಸಲಿದೆ. ಇಂತಹ ಸಂದರ್ಭಗಳಲ್ಲಿ, ಸ್ವಚ್ಛತಾ ಕಾರ್ಯಕ್ಕೆ ತಗುಲಿದ ವೆಚ್ಚವನ್ನು ಆಯಾ ನಿವೇಶನಗಳ ಮಾಲೀಕರ ಆಸ್ತಿ ತೆರಿಗೆಯೊಂದಿಗೆ ಸೇರಿಸಿ ವಸೂಲಿ ಮಾಡಲಾಗುತ್ತದೆ ಎಂದು ಕೃಷ್ಣಭೈರೇಗೌಡ ಹೇಳಿದ್ದಾರೆ.
ನಗರದ ಸ್ವಚ್ಛತೆಯನ್ನು ಹಂತ ಹಂತವಾಗಿ ಸುಧಾರಿಸುವತ್ತ ಗಮನ ಹರಿಸಲಾಗಿದೆ. ಈಗಾಗಲೇ ಫುಟ್‌ಪಾತ್‌ಗಳ ಸ್ವಚ್ಛತೆ ಬಗ್ಗೆ ಕ್ರಮ ಕೈಗೊಂಡಿದ್ದು, ಈಗ ಕಸ ನಿರ್ಮೂಲನೆಗೆ ಒತ್ತು ನೀಡಲಾಗಿದೆ. ಕಸ ತೆಗೆಯದ ಜಾಗದ ಮಾಲೀಕರಿಗೆ ಬಿಸಿ ಮುಟ್ಟಿಸುವ ಮೂಲಕ ನಗರವನ್ನು ಸ್ವಚ್ಛವಾಗಿಡಲು ಇದು ಹೊಸ ಪ್ರಯತ್ನವಾಗಿದೆ ಎಂದು ಸಚಿವರು ತಿಳಿಸಿದ್ದಾರೆ.



