July 15, 2026
Wednesday, July 15, 2026
spot_img

ಕೊಳೆತ ಆಲೂಗಡ್ಡೆ+ ಗಲೀಜು ನೀರು! ಬೇಕರಿಯಲ್ಲಿ ಸಿಗುವ ಇಂಥ ಚಿಪ್ಸ್‌ ಮಕ್ಕಳಿಗೆ ತಿನಿಸ್ತೀರಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೇಕರಿಗಳಲ್ಲಿ ಸಿಗುವ ತಿನಿಸುಗಳನ್ನು ತಿನ್ನುವ ಹಾಗೂ ಮಕ್ಕಳಿಗೆ ಕೊಡುವ ಮುನ್ನ ಅವರು ಹೇಗೆ ಅದನ್ನು ತಯಾರಿಸ್ತಾರೆ ಎನ್ನುವುದನ್ನು ಕಣ್ಣಾರೆ ನೋಡಿ. ನಂತರ ತಿನ್ನಬೇಕು ಎನಿಸುತ್ತದೆಯೋ ಇಲ್ಲವೋ ಹೇಳಿ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದ ಬೇಕರಿಯೊಂದರಲ್ಲಿ ಕೊಳೆತ ಆಲೂಗಡ್ಡೆಗಳು ಹಾಗೂ ಗಲೀಜು ನೀರಿನಲ್ಲಿ ಚಿಪ್ಸ್‌ ಮಾಡಲಾಗಿದೆ. ಇದನ್ನು ತಿಂದ ಮಕ್ಕಳಿಗೆ ರಾತ್ರಿ ಮಲಗಿ ಬೆಳಗ್ಗೆ ಏಳುವುದರೊಳಗೆ ಕೆಮ್ಮು ಕಾಣಿಸಿಕೊಂಡಿದೆ.

ಸ್ಥಳೀಯ ನಿವಾಸಿಯೊಬ್ಬರು ಮಕ್ಕಳಿಗಾಗಿ ಬೇಕರಿಯಲ್ಲಿ ಆಲೂಗಡ್ಡೆ ಚಿಪ್ಸ್‌ ತೆಗೆದುಕೊಂಡು ಹೋಗಿದ್ದಾರೆ. ಮಕ್ಕಳು ಅದನ್ನು ತಿಂದು ಮಲಗಿದ್ದಾರೆ. ಬೆಳಗ್ಗೆ ಮಕ್ಕಳಿಗೆ ತೀವ್ರ ಕೆಮ್ಮು ಕಾಣಿಸಿದೆ. ಮಕ್ಕಳಿಗೆ ದಿಢೀರನೆ ಕೆಮ್ಮು ಬರೋದಕ್ಕೆ ಕಾರಣ ಏನು ಎಂದು ಪೋಷಕರು ಹುಡುಕಾಡಿದ್ದಾರೆ. ಚಿಪ್ಸ್‌ನಲ್ಲಿ ಕಪ್ಪು ಚುಕ್ಕೆ ಇರುವುದು ಗೊತ್ತಾಗಿದೆ. ಇದೆಲ್ಲ ಕೊಳೆತ ಆಲೂಗಡ್ಡೆಯಾಗಿತ್ತು. ಪೋಷಕರು ಬೇಕರಿಗೆ ಭೇಟಿ ನೀಡಿದ್ದು, ಅಸಹ್ಯಕರ ಜಾಗದಲ್ಲಿ ಚಿಪ್ಸ್‌ ತಯಾರಿ ಮಾಡಲಾಗುತ್ತಿದೆ ಎಂದು ಗೊತ್ತಾಗಿದೆ. ಕೊಳೆತು ನಾರುತ್ತಿದ್ದ ಆಲೂಗಡ್ಡೆ ಹಾಗೂ ಗಲೀಜು ನೀರನ್ನು ಹಾಕಿ ಚಿಪ್ಸ್‌ ಮಾಡಿದ್ದು ಕಾಣಿಸಿದೆ. ತಕ್ಷಣವೇ ಜನ ಮಾಲೀಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದ ಬೇಕರಿ ವಿರುದ್ಧ ಸ್ಥಳೀಯರು ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಸಾರ್ವಜನಿಕರ ಸಮ್ಮುಖದಲ್ಲೇ ಕೊಳೆತ ಆಲೂಗಡ್ಡೆಯಿಂದ ತಯಾರಾಗಿದ್ದ ಚಿಪ್ಸ್‌ನ ಸ್ಯಾಂಪಲ್‌ಗಳನ್ನು ಹೆಚ್ಚಿನ ತಪಾಸಣೆಗಾಗಿ ಲ್ಯಾಬ್‌ಗೆ ರವಾನಿಸಿದ್ದಾರೆ. ಜೊತೆಗೆ, ಅಂಗಡಿಯ ಮಾಲೀಕನಿಗೆ ಕಟ್ಟುನಿಟ್ಟಿನ ನೋಟಿಸ್ ಜಾರಿ ಮಾಡಿ, ಬೇಕರಿಯನ್ನು ಸಂಪೂರ್ಣವಾಗಿ ಸೀಜ್ ಮಾಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !