ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ಯುನೈಟೆಡ್ ಕಿಂಗ್ಡಮ್ ನಡುವಿನ ಐತಿಹಾಸಿಕ ‘ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದ’ ಇಂದಿನಿಂದ ಅಧಿಕೃತವಾಗಿ ಜಾರಿಗೆ ಬಂದಿದೆ.
ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಲಂಡನ್ಗೆ ಭೇಟಿ ನೀಡಿದ್ದಾಗ ಈ ಮಹತ್ವದ ಒಪ್ಪಂದಕ್ಕೆ ಅಂತಿಮ ಮುದ್ರೆ ಬಿದ್ದಿತ್ತು. 2030ರ ವೇಳೆಗೆ ಉಭಯ ದೇಶಗಳ ನಡುವಿನ ವಾಣಿಜ್ಯ ವಹಿವಾಟನ್ನು ಬರೋಬ್ಬರಿ 100 ಬಿಲಿಯನ್ ಡಾಲರ್ಗೆ ಹೆಚ್ಚಿಸುವ ಬೃಹತ್ ಗುರಿಯನ್ನು ಈ ಒಪ್ಪಂದ ಹೊಂದಿದೆ. ಈ ಒಪ್ಪಂದದ ಅನ್ವಯ, ಬ್ರಿಟನ್‌ನಿಂದ ಭಾರತಕ್ಕೆ ಆಮದು ಮಾಡಿಕೊಳ್ಳಲಾಗುವ ಪ್ರೀಮಿಯಂ ಕಾರುಗಳು, ಐಷಾರಾಮಿ ಚಾಕೊಲೇಟ್ಗಳು ಹಾಗೂ ಸ್ಕಾಚ್ ವಿಸ್ಕಿಗಳ ಮೇಲಿನ ಆಮದು ಸುಂಕವನ್ನು ಗಣನೀಯವಾಗಿ ಕಡಿತಗೊಳಿಸಲಾಗುತ್ತಿದ್ದು, ಇವುಗಳ ಬೆಲೆ ಮಾರುಕಟ್ಟೆಯಲ್ಲಿ ಭಾರಿ ಕುಸಿತ ಕಾಣಲಿವೆ.
ಈ ಹಿಂದೆ ವಿದೇಶಿ ಬ್ರ್ಯಾಂಡ್‌ನ ಬಿಸ್ಕೆಟ್, ಚಾಕೋಲೆಟ್ ಖರೀದಿ ಮಾಡಬೇಕಂದರೆ ಭಾರತೀಯರು ಭಾರೀ ತೆರಿಗೆ ಪಾವತಿಸಬೇಕಿತ್ತು. ಆದರೆ ಈ ಹೊರೆ ಇನ್ನು ಕಮ್ಮಿಯಾಗಲಿದೆ. ಇದುವರೆಗೆ ಬ್ರಿಟನ್‌ನಿಂದ ಆಮದು ಮಾಡಿಕೊಳ್ಳುವ ಪ್ರೀಮಿಯಂ ಕಾರುಗಳ ಮೇಲೆ ಬರೋಬ್ಬರಿ ಶೇ. 110ತೆರಿಗೆ ಇತ್ತು. ಅದನ್ನು ಈಗ ಹಂತ-ಹಂತವಾಗಿ ಕೇವಲ ಶೇ.10 ಕ್ಕೆ ಇಳಿಸಲಾಗುತ್ತಿದೆ, ಇದರ ನೇರ ಲಾಭ ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ಕಾರುಗಳಿಗೂ ಸಿಗಲಿದೆ. ಭಾರತದಲ್ಲಿ ಸ್ಕಾಚ್ ವಿಸ್ಕಿ ಮೇಲಿದ್ದ ಶೇ.150 ನಷ್ಟು ಬೃಹತ್ ಸುಂಕವನ್ನು ತಕ್ಷಣವೇ ಶೇ.75 ಕ್ಕೆ ಇಳಿಸಲಾಗಿದ್ದು, ಮುಂದಿನ 10 ವರ್ಷಗಳಲ್ಲಿ ಇದು ಶೇ.40 ಕ್ಕೆ ಕುಸಿಯಲಿದೆ.



