ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಬಂಡಾಯದ ಕಾವು ಜೋರಾಗಿದೆ. ಮಮತಾ ಬ್ಯಾನರ್ಜಿ ಅವರಿಗೆ ಮತ್ತೊಂದು ತೀವ್ರ ಆಘಾತ ಎದುರಾಗಿದ್ದು, ಹಿರಿಯ ಶಾಸಕ ಮದನ್ ಮಿತ್ರ ಅವರು ಬಂಡಾಯ ಬಣವನ್ನು ಸೇರಿಕೊಂಡಿದ್ದಾರೆ. ರಿತಬ್ರತಾ ಬ್ಯಾನರ್ಜಿ ನೇತೃತ್ವದ ರೆಬೆಲ್ ತಂಡಕ್ಕೆ ಬೆಂಬಲ ಸೂಚಿಸಿದ ಮಿತ್ರ, ತಾವು ಕೇವಲ “ವಿಧಾನಸಭೆಯಲ್ಲಿನ ಕೊಠಡಿಯನ್ನು ಬದಲಾಯಿಸಿದ್ದೇನೆಯೇ ಹೊರತು ಪಕ್ಷವನ್ನಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರು ಕನಿಷ್ಠ ಆರು ತಿಂಗಳ ಕಾಲ ತಮ್ಮ ಹುದ್ದೆಯಿಂದ ದೂರ ಸರಿಯಬೇಕೆಂಬ ಬೇಡಿಕೆಯನ್ನು ಪಕ್ಷ ಒಪ್ಪದ ಕಾರಣ ತಾವು ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ತಿಳಿಸಿದ್ದಾರೆ.
ಬಿಜೆಪಿ ವಿರುದ್ಧ ಕೆಂಡಾಮಂಡಲವಾದ ಮಮತಾ ಬ್ಯಾನರ್ಜಿ
ಮದನ್ ಮಿತ್ರ ಅವರ ಈ ದಿಢೀರ್ ನಿರ್ಧಾರಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಮಮತಾ ಬ್ಯಾನರ್ಜಿ, “ಹೋಗುವವರು ಯಾರು ಬೇಕಾದರೂ ಹೋಗಬಹುದು” ಎಂದು ಆಕ್ರೋಶ ಹೊರಹಾಕಿದ್ದಾರೆ. ಇದೇ ವೇಳೆ ಭಾರತೀಯ ಜನತಾ ಪಾರ್ಟಿ (BJP) ವಿರುದ್ಧ ಗಂಭೀರ ಆರೋಪ ಮಾಡಿದ ದೀದಿ, “ನನಗೆ ಹೃದಯಾಘಾತವಾಗಲಿ ಎಂದು ಬಿಜೆಪಿ ಬಯಸಿತ್ತು. ಆದರೆ ನಿಮ್ಮ ರಾಜಕೀಯ ಅಂತ್ಯ ಕಾಣುವವರೆಗೂ ನಾನು ಜೀವಂತವಾಗಿರುತ್ತೇನೆ” ಎಂದು ನೇರ ಸವಾಲು ಹಾಕಿದ್ದಾರೆ. ಟಿಎಂಸಿ ಶಾಸಕರ ವಲಸೆಯ ಹಿಂದೆ ತನಿಖಾ ಸಂಸ್ಥೆಗಳ ರಾಜಕೀಯ ಪಿತೂರಿ ಇದೆ ಎಂದು ಅವರು ಆರೋಪಿಸಿದ್ದಾರೆ.



