ಹೊಸದಿಗಂತ ದಾವಣಗೆರೆ:
ದಾವಣಗೆರೆಯ ಸರಸ್ವತಿ ಬಡಾವಣೆಯ ‘ಪವರ್ ಫಿಟ್ನೆಸ್ ಜಿಮ್’ ಮಾಲೀಕ ಇಸ್ಮಾಯಿಲ್ ವಿರುದ್ಧ ಅತ್ಯಾಚಾರ ಮತ್ತು ಬ್ಲಾಕ್ಮೇಲ್ ಆರೋಪದಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಬಿಎನ್ಎಸ್ (BNS) ಕಾಯ್ದೆ 2023 ರ ವಿವಿಧ ಸೆಕ್ಷನ್ಗಳಡಿ (64(2)(M), 351(2), 77) ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಗುಪ್ತ ಕ್ಯಾಮೆರಾ ಹಾಗೂ ಬ್ಲಾಕ್ಮೇಲ್ ಆರೋಪ
ಚೇಂಜಿಂಗ್ ರೂಂನಲ್ಲಿ ಬಟ್ಟೆ ಬದಲಿಸುವ ದೃಶ್ಯಗಳನ್ನು ಇಸ್ಮಾಯಿಲ್ ತನ್ನ ಮೊಬೈಲ್ನಲ್ಲಿ ಚಿತ್ರೀಕರಿಸಿದ್ದ ಎನ್ನಲಾಗಿದೆ. ಈ ವಿಡಿಯೋಗಳನ್ನು ಇಟ್ಟುಕೊಂಡು ಹೆದರಿಸಿ, ಕಳೆದ ಮಾರ್ಚ್ 28 ರಂದು ಜಿಮ್ಗೆ ಕರೆಸಿಕೊಂಡು ಅತ್ಯಾಚಾರ ಎಸಗಿದ್ದಲ್ಲದೆ, ಯಾರಿಗಾದರೂ ವಿಷಯ ತಿಳಿಸಿದರೆ ಕುಟುಂಬವನ್ನು ಮುಗಿಸುವುದಾಗಿ ಬೆದರಿಕೆ ಹಾಕಿದ್ದ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಜಿಮ್ ಜಿಹಾದ್ Vs ಹನಿಟ್ರ್ಯಾಪ್ ಆರೋಪ-ಪ್ರತ್ಯಾರೋಪ
ಈ ಹಿಂದೆ ಹಿಂದೂ ಸಂಘಟನೆಗಳು ಈ ಜಿಮ್ನಲ್ಲಿ ಮಹಿಳೆಯರ ಶೋಷಣೆ ನಡೆಯುತ್ತಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ್ದವು. ಆದರೆ, ಇಸ್ಮಾಯಿಲ್ ಕುಟುಂಬಸ್ಥರು ಇದು ಸುಳ್ಳು ಆರೋಪ, ಮಹಿಳೆಯೇ ತಮಗೆ ₹10 ಲಕ್ಷದ ಹನಿಟ್ರ್ಯಾಪ್ ಬೇಡಿಕೆ ಇಟ್ಟಿದ್ದಾಳೆ ಎಂದು ವಿಶ್ವ ಮುಸ್ಲಿಂ ಪರಿಷತ್ ಬೆಂಬಲದೊಂದಿಗೆ ಪ್ರತ್ಯಾರೋಪ ಮಾಡಿದ್ದರು. ಸದ್ಯ ಹನಿಟ್ರ್ಯಾಪ್ ಆರೋಪ ಎದುರಿಸುತ್ತಿದ್ದ ಮಹಿಳೆಯೇ ಈಗ ಅತ್ಯಾಚಾರದ ಗಂಭೀರ ದೂರು ದಾಖಲಿಸಿದ್ದಾರೆ. ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ.



