October 15, 2026
Thursday, October 15, 2026
spot_img

ಹನಿಟ್ರ್ಯಾಪ್ ಪ್ರತ್ಯಾರೋಪ ಬೆನ್ನಲ್ಲೇ ಉಲ್ಟಾ ಆದ ಕೇಸ್: ಪವರ್ ಫಿಟ್ನೆಸ್ ಮಾಲೀಕನ ವಿರುದ್ಧ FIR

ಹೊಸದಿಗಂತ ದಾವಣಗೆರೆ:

ದಾವಣಗೆರೆಯ ಸರಸ್ವತಿ ಬಡಾವಣೆಯ ‘ಪವರ್ ಫಿಟ್‌ನೆಸ್ ಜಿಮ್’ ಮಾಲೀಕ ಇಸ್ಮಾಯಿಲ್ ವಿರುದ್ಧ ಅತ್ಯಾಚಾರ ಮತ್ತು ಬ್ಲಾಕ್‌ಮೇಲ್ ಆರೋಪದಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಬಿಎನ್‌ಎಸ್ (BNS) ಕಾಯ್ದೆ 2023 ರ ವಿವಿಧ ಸೆಕ್ಷನ್‌ಗಳಡಿ (64(2)(M), 351(2), 77) ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಗುಪ್ತ ಕ್ಯಾಮೆರಾ ಹಾಗೂ ಬ್ಲಾಕ್‌ಮೇಲ್ ಆರೋಪ

ಚೇಂಜಿಂಗ್ ರೂಂನಲ್ಲಿ ಬಟ್ಟೆ ಬದಲಿಸುವ ದೃಶ್ಯಗಳನ್ನು ಇಸ್ಮಾಯಿಲ್ ತನ್ನ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದ ಎನ್ನಲಾಗಿದೆ. ಈ ವಿಡಿಯೋಗಳನ್ನು ಇಟ್ಟುಕೊಂಡು ಹೆದರಿಸಿ, ಕಳೆದ ಮಾರ್ಚ್ 28 ರಂದು ಜಿಮ್‌ಗೆ ಕರೆಸಿಕೊಂಡು ಅತ್ಯಾಚಾರ ಎಸಗಿದ್ದಲ್ಲದೆ, ಯಾರಿಗಾದರೂ ವಿಷಯ ತಿಳಿಸಿದರೆ ಕುಟುಂಬವನ್ನು ಮುಗಿಸುವುದಾಗಿ ಬೆದರಿಕೆ ಹಾಕಿದ್ದ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಜಿಮ್ ಜಿಹಾದ್ Vs ಹನಿಟ್ರ್ಯಾಪ್ ಆರೋಪ-ಪ್ರತ್ಯಾರೋಪ

ಈ ಹಿಂದೆ ಹಿಂದೂ ಸಂಘಟನೆಗಳು ಈ ಜಿಮ್‌ನಲ್ಲಿ ಮಹಿಳೆಯರ ಶೋಷಣೆ ನಡೆಯುತ್ತಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ್ದವು. ಆದರೆ, ಇಸ್ಮಾಯಿಲ್ ಕುಟುಂಬಸ್ಥರು ಇದು ಸುಳ್ಳು ಆರೋಪ, ಮಹಿಳೆಯೇ ತಮಗೆ ₹10 ಲಕ್ಷದ ಹನಿಟ್ರ್ಯಾಪ್ ಬೇಡಿಕೆ ಇಟ್ಟಿದ್ದಾಳೆ ಎಂದು ವಿಶ್ವ ಮುಸ್ಲಿಂ ಪರಿಷತ್ ಬೆಂಬಲದೊಂದಿಗೆ ಪ್ರತ್ಯಾರೋಪ ಮಾಡಿದ್ದರು. ಸದ್ಯ ಹನಿಟ್ರ್ಯಾಪ್ ಆರೋಪ ಎದುರಿಸುತ್ತಿದ್ದ ಮಹಿಳೆಯೇ ಈಗ ಅತ್ಯಾಚಾರದ ಗಂಭೀರ ದೂರು ದಾಖಲಿಸಿದ್ದಾರೆ. ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ.

Must Read