July 15, 2026
Wednesday, July 15, 2026
spot_img

ಜುಲೈ 17 ರಂದು ಸರ್ಕಾರದ ವಿರುದ್ದ ಬಿಜೆಪಿಯಿಂದ ಬೃಹತ್ ಪ್ರತಿಭಟನೆ: ಬಿ.ವೈ ವಿಜಯೇಂದ್ರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರವು ಸಂಪೂರ್ಣವಾಗಿ ರೈತವಿರೋಧಿ, ಬಡವರ ವಿರೋಧಿ ಮತ್ತು ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತೀವ್ರವಾಗಿ ಆರೋಪಿಸಿದ್ದಾರೆ. ಸರ್ಕಾರದ ಈ ಧೋರಣೆಯನ್ನು ಖಂಡಿಸಿ ಜುಲೈ 17 ರಂದು ಶುಕ್ರವಾರ ಬೆಂಗಳೂರಿನಲ್ಲಿ ಬೃಹತ್ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಅವರು ಪ್ರಕಟಿಸಿದ್ದಾರೆ.

ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಬಿ.ವೈ. ವಿಜಯೇಂದ್ರ, ಜುಲೈ 17 ರಂದು ಶುಕ್ರವಾರ ಬೆಳಗ್ಗೆಯಿಂದ ಸಂಜೆವರೆಗೆ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಬಿಜೆಪಿಯ ಎಲ್ಲಾ ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರು ಸೇರಿದಂತೆ ಮಾಜಿ ಜನಪ್ರತಿನಿಧಿಗಳು ಒಟ್ಟಾಗಿ ಧರಣಿ ಸತ್ಯಾಗ್ರಹ ನಡೆಸಲಿದ್ದೇವೆ ಎಂದು ತಿಳಿಸಿದರು. ಹೋರಾಟಗಾರ ರೈತರ ವಿರುದ್ಧ ದಾಖಲಿಸಿರುವ ಎಲ್ಲಾ ಪೊಲೀಸ್ ಪ್ರಕರಣಗಳನ್ನು ತಕ್ಷಣವೇ ಹಿಂಪಡೆಯಬೇಕು ಮತ್ತು ಬಿಡದಿ ಟೌನ್‌ಶಿಪ್ ನಿರ್ಧಾರದಿಂದ ಸರ್ಕಾರ ಸಂಪೂರ್ಣವಾಗಿ ಹಿಂದೆ ಸರಿಯಬೇಕು ಎಂದು ಈ ಧರಣಿಯ ಮೂಲಕ ಆಗ್ರಹಿಸಲಾಗುವುದು ಎಂದರು.

ಇದನ್ನೂ ಓದಿ:

ರಿಯಲ್ ಎಸ್ಟೇಟ್ ಸರ್ಕಾರ:

ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ವಿರುದ್ಧ ವಾಗ್ದಾಳಿ ನಡೆಸಿದ ವಿಜಯೇಂದ್ರ, ರಾಜ್ಯ ಸರ್ಕಾರಕ್ಕೆ ರಿಯಲ್ ಎಸ್ಟೇಟ್ ವ್ಯವಹಾರವೇ ಮುಖ್ಯ ಆದ್ಯತೆಯಾಗಿದೆಯೇ ಹೊರತು, ಕಷ್ಟದಲ್ಲಿರುವ ರೈತರ ವಿಚಾರಗಳಲ್ಲ” ಎಂದು ಟೀಕಿಸಿದರು. ಡಿ.ಕೆ. ಶಿವಕುಮಾರ್ ಹಿಂದೆ ಬೃಹತ್ ನೀರಾವರಿ ಸಚಿವರಾಗಿದ್ದಾಗ ಹೊಸಪೇಟೆಯ ತುಂಗಭದ್ರಾ ಡ್ಯಾಮಿನ ಕ್ರಸ್ಟ್‌ ಗೇಟ್ ದುರಸ್ತಿ ಮಾಡುವಂತೆ ಒತ್ತಾಯಿಸಲಾಗಿತ್ತು. ಆದರೆ ಅದನ್ನು ಮಾಡಿಸಲು ಇಲಾಖೆಯು ಸುಮಾರು 24 ತಿಂಗಳುಗಳ ಸುದೀರ್ಘ ಸಮಯ ತೆಗೆದುಕೊಂಡಿತು ಎಂದು ಆಕ್ಷೇಪಿಸಿದರು. ಸರ್ಕಾರದ ಈ ಬೇಜವಾಬ್ದಾರಿತನದಿಂದಾಗಿ ರೈತರು ಎರಡನೇ ಬೆಳೆ ಬೆಳೆಯಲಾಗದೆ ಭಾರಿ ಪ್ರಮಾಣದ ನಷ್ಟ ಅನುಭವಿಸುವಂತಾಯಿತು ಎಂದು ವಿಜಯೇಂದ್ರ ಆಕ್ರೋಶ ಹೊರಹಾಕಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !