ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುವುದನ್ನು ತಡೆಯುವ ಏಕೈಕ ಉದ್ದೇಶದಿಂದಲೇ ಹೆಚ್.ಡಿ. ದೇವೇಗೌಡ, ಹೆಚ್.ಡಿ. ಕುಮಾರಸ್ವಾಮಿ ಹಾಗೂ ಆರ್. ಅಶೋಕ್ ಅವರು ಬಿಡದಿ ಟೌನ್‌ಶಿಪ್ ವಿಚಾರವನ್ನು ಮುಂದಿಟ್ಟುಕೊಂಡು ಆರೋಪ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಚಲುವರಾಯಸ್ವಾಮಿ ಕಿಡಿಕಾರಿದ್ದಾರೆ.
ದೇವೇಗೌಡರ ಸತ್ಯಾಗ್ರಹಕ್ಕೆ ಚಲುವರಾಯಸ್ವಾಮಿ ಪ್ರಶ್ನೆ
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ನಮಗೆ ಅಪಾರ ಗೌರವವಿದೆ. ಆದರೆ, ದೇಶದಲ್ಲಿ ‘ನೀಟ್’ ಪರೀಕ್ಷಾ ಅಕ್ರಮ ನಡೆದು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಾಗ ಧ್ವನಿ ಎತ್ತದ ಗೌಡರು, ಈಗ ಡಿ.ಕೆ. ಶಿವಕುಮಾರ್ ವಿರುದ್ಧ ಸತ್ಯಾಗ್ರಹ ಮಾಡಲು ಹೊರಟಿದ್ದಾರೆ. ದೇವನಹಳ್ಳಿಯಲ್ಲಿ ರೈತರು ಬೃಹತ್ ಪ್ರತಿಭಟನೆ ನಡೆಸಿದಾಗಲೂ ದೇವೇಗೌಡರು ಅಲ್ಲಿಗೆ ಭೇಟಿ ನೀಡಿರಲಿಲ್ಲ ಎಂದು ನೆನಪಿಸಿದರು.
ಜೆಡಿಎಸ್-ಬಿಜೆಪಿ ಮೈತ್ರಿಗೆ ಕೌಂಟರ್
“ಪ್ರತಿಭಟನಾ ಸ್ಥಳಕ್ಕೆ ಬನ್ನಿ ಎಂದು ಕುಮಾರಸ್ವಾಮಿ ಕರೆಯುತ್ತಿದ್ದಾರೆ. ನಾವು ಅಲ್ಲಿಗೆ ಕುಸ್ತಿ ಆಡಲು ಹೋಗಬೇಕೇ?” ಎಂದು ಪ್ರಶ್ನಿಸಿದ ಚಲುವರಾಯಸ್ವಾಮಿ, ರೈತರ ಸಮಸ್ಯೆಗಳನ್ನು ಬಗೆಹರಿಸಲು ಕೆಂಗಲ್ ಹನುಮಂತಯ್ಯನವರು ನಿರ್ಮಿಸಿರುವ ವಿಧಾನಸೌಧವಿದೆ ಎಂದರು. ಪಂಜಾಬ್ ಮತ್ತು ಹರಿಯಾಣದಲ್ಲಿ ರೈತರು ದೀರ್ಘಕಾಲ ಹೋರಾಟ ನಡೆಸಿದಾಗ ದೇವೇಗೌಡರು ಏಕೆ ಹೋಗಲಿಲ್ಲ? ಚರ್ಚೆಗೆ ಕರೆದರೆ ಕುಮಾರಸ್ವಾಮಿ ವಿಧಾನಸೌಧಕ್ಕೆ ಬರಲ್ಲ ಎನ್ನುತ್ತಾರೆ. ಸದ್ಯ ಕುಮಾರಸ್ವಾಮಿ ಹಾಗೂ ಅಶೋಕ್ ಇಬ್ಬರಿಗೂ ತೀವ್ರ ನೋವಾಗಿದೆ ಎಂದು ಅವರು ಲೇವಡಿ ಮಾಡಿದರು.



