ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ ಹಲವು ಭಾಗಗಳಲ್ಲಿ ಕೋವಿಡ್-19 ಸೋಂಕಿನ ಪ್ರಕರಣಗಳು ಮತ್ತೆ ನಿಧಾನವಾಗಿ ಏರಿಕೆಯಾಗುತ್ತಿರುವುದು ಎಲ್ಲೆಡೆ ಆತಂಕ ಸೃಷ್ಟಿಸುತ್ತಿದೆ.
ಆಂಧ್ರಪ್ರದೇಶದಲ್ಲಿ ಕೋವಿಡ್‌ಗೆ ಸಂಬಂಧಿಸಿ ಎರಡು ಸಾವುಗಳು ವರದಿಯಾಗಿರುವುದು, ಕೆಲವು ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿರುವುದು ಆಡಳಿತವನ್ನು ಅಲರ್ಟ್ ಮಾಡಿದ್ದು, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಗಡಿಭಾಗಗಳಲ್ಲಿ ನಿಗಾವನ್ನು ಹೆಚ್ಚಿಸಿವೆ. ಇದು ಹೊಸ ಕೋವಿಡ್ ಅಲೆ ಎಂದು ಹೇಳಲು ಯಾವುದೇ ವೈಜ್ಞಾನಿಕ ಆಧಾರ ಇಲ್ಲ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರಾದರೂ ಆತಂಕ ಮಾತ್ರ ದೂರವಾಗಿಲ್ಲ.
ಆರೋಗ್ಯ ತಜ್ಞರ ಪ್ರಕಾರ, ಸದ್ಯ ದೇಶದಲ್ಲಿ ಕಂಡುಬರುತ್ತಿರುವ ಸೋಂಕುಗಳು ಹೆಚ್ಚಾಗಿ ಒಮಿಕ್ರಾನ್‌ನ ಉಪತಳಿಗಳಿಂದ ಉಂಟಾಗುತ್ತಿದ್ದು, ಅವು ವೇಗವಾಗಿ ಹರಡಬಹುದಾದರೂ ಬಹುತೇಕ ರೋಗಿಗಳಲ್ಲಿ ತೀವ್ರ ಅನಾರೋಗ್ಯ ಉಂಟುಮಾಡುತ್ತಿಲ್ಲ. ಆದಾಗ್ಯೂ ವಯೋವೃದ್ಧರು, ಮಧುಮೇಹ, ಹೃದಯ, ಶ್ವಾಸಕೋಶದ ಕಾಯಿಲೆ ಇರುವವರು ಹಾಗೂ ರೋಗನಿರೋಧಕ ಶಕ್ತಿ ಕಡಿಮೆ ಇರುವವರು ಹೆಚ್ಚಿನ ಎಚ್ಚರಿಕೆ ವಹಿಸಬೇಕಾಗಿದೆ.
ಮಳೆಗಾಲದಲ್ಲಿ ವೈರಲ್ ಸೋಂಕುಗಳ ಹೆಚ್ಚಳ
ಮುಂಬೈ ಸೇರಿದಂತೆ ಹಲವು ನಗರಗಳ ವೈದ್ಯರು ಈ ಮಳೆಗಾಲದಲ್ಲಿ ಇನ್‌ಫ್ಲುಯೆಂಜಾ A, ಕೋವಿಡ್-19 ಹಾಗೂ H1N1 ಸೋಂಕುಗಳ ಪ್ರಮಾಣ ಹೆಚ್ಚುತ್ತಿರುವುದನ್ನು ಗಮನಿಸಿರುವುದಾಗಿ ತಿಳಿಸಿದ್ದಾರೆ. ಅನೇಕ ಆಸ್ಪತ್ರೆಗಳಲ್ಲಿ ಜ್ವರ, ಗಂಟಲು ನೋವು, ಕೆಮ್ಮು, ಮೈಕೈ ನೋವು ಮತ್ತು ಆಯಾಸದ ಲಕ್ಷಣಗಳೊಂದಿಗೆ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಉಸಿರಾಟದ ಸೋಂಕುಗಳನ್ನು ಸಾಮಾನ್ಯ ಜ್ವರ ಎಂದು ನಿರ್ಲಕ್ಷ್ಯ ಮಾಡಬಾರದು ಎಂದು ವೈದ್ಯರು ಎಚ್ಚರಿಸಿದ್ದಾರೆ.
ಪ್ರಮುಖ ಲಕ್ಷಣಗಳು ಯಾವುದು?
ಜ್ವರ, ಗಂಟಲು ನೋವು, ಒಣ ಕೆಮ್ಮು, ಮೂಗು ಕಟ್ಟುವುದು ಅಥವಾ ನೀರು ಸುರಿಯುವುದು, ತೀವ್ರ ಆಯಾಸ, ಮೈಕೈ ನೋವು, ಕೆಲವರಲ್ಲಿ ರುಚಿ ಮತ್ತು ವಾಸನೆ ಗ್ರಹಿಸುವ ಸಾಮರ್ಥ್ಯದಲ್ಲಿ ಬದಲಾವಣೆ ಪ್ರಸ್ತುತ ಸೋಂಕಿತರಲ್ಲಿ ಹೆಚ್ಚಾಗಿ ಕಂಡುಬರುತ್ತಿರುವ ಲಕ್ಷಣಗಳಾಗಿವೆ. ಉಸಿರಾಟದ ತೊಂದರೆ, ಎದೆನೋವು ಅಥವಾ ಆಮ್ಲಜನಕದ ಮಟ್ಟ ಕಡಿಮೆಯಾಗುವ ಲಕ್ಷಣಗಳು ಕಂಡುಬಂದರೆ ತಕ್ಷಣ ಆಸ್ಪತ್ರೆಗೆ ಭೇಟಿ ನೀಡುವಂತೆ ವೈದ್ಯರು ಸಲಹೆ ನೀಡಿದ್ದಾರೆ.
ರಾಜ್ಯಗಳು ಎಚ್ಚರಿಕೆಯಲ್ಲಿ
ಆಂಧ್ರಪ್ರದೇಶದಲ್ಲಿ ಕೋವಿಡ್ ಸಂಬಂಧಿತ ಸಾವುಗಳ ಬಳಿಕ ಕೆಲವು ರಾಜ್ಯಗಳು ಗಡಿಭಾಗಗಳಲ್ಲಿ ಆರೋಗ್ಯ ತಪಾಸಣೆ, ಸಂಪರ್ಕಿತರ ಪತ್ತೆ ಹಾಗೂ ಪರೀಕ್ಷಾ ವ್ಯವಸ್ಥೆಯನ್ನು ಚುರುಕುಗೊಳಿಸಿವೆ. ದೊಡ್ಡ ಪ್ರಮಾಣದ ಜನಸಂದಣಿ ಇರುವ ಕಾರ್ಯಕ್ರಮಗಳ ಮೇಲೂ ಆರೋಗ್ಯ ಇಲಾಖೆ ನಿಗಾ ವಹಿಸಿದೆ.
ಸೋಂಕಿನ ಪ್ರಮಾಣದಲ್ಲಿ ಸಣ್ಣ ಏರಿಕೆ ಕಂಡುಬಂದಿರುವುದು ನಿಜವಾದರೂ, ಸದ್ಯ ಆಸ್ಪತ್ರೆ ದಾಖಲಾತಿ ಮತ್ತು ತೀವ್ರ ಪ್ರಕರಣಗಳ ಸಂಖ್ಯೆ ಹಿಂದಿನ ಅಲೆಗಳಷ್ಟು ಗಂಭೀರವಾಗಿಲ್ಲ ಎಂದು ವೈದ್ಯರು ಹೇಳಿದ್ದಾರೆ.



