September 20, 2026
Sunday, September 20, 2026
spot_img

ಸೋನಂ ವಾಂಗ್‌ಚುಕ್‌ಗೆ ದೀಪಿಕಾ ಬೆಂಬಲ? ವೈರಲ್ ಸ್ಕ್ರೀನ್‌ಶಾಟ್‌ನ ಅಸಲಿ ಸತ್ಯ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ಸ್ಟಾರ್ ನಟಿ ದೀಪಿಕಾ ಪಡುಕೋಣೆ ಅವರ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಇನ್‌ಸ್ಟಾಗ್ರಾಮ್ ಸ್ಟೋರಿಯೊಂದರ ಸ್ಕ್ರೀನ್‌ಶಾಟ್ ಭಾರಿ ವೈರಲ್ ಆಗುತ್ತಿದೆ. ಲಡಾಖ್‌ನ ಪ್ರಮುಖ ಸಾಮಾಜಿಕ ಹೋರಾಟಗಾರ ಸೋನಂ ವಾಂಗ್‌ಚುಕ್ ಅವರಿಗೆ ದೀಪಿಕಾ ಬೆಂಬಲ ಸೂಚಿಸಿದ್ದಾರೆ ಎಂದು ಈ ಪೋಸ್ಟ್‌ನಲ್ಲಿ ಬಿಂಬಿಸಲಾಗಿದೆ. ಅಲ್ಲದೆ, ಪೋಸ್ಟ್ ಮಾಡಿದ ಕೆಲವೇ ನಿಮಿಷಗಳಲ್ಲಿ ನಟಿ ಅದನ್ನು ಡಿಲೀಟ್ ಮಾಡಿದ್ದಾರೆ ಎಂಬ ಸುಳ್ಳು ಕಥೆಯನ್ನು ಸೋಷಿಯಲ್ ಮೀಡಿಯಾದಲ್ಲಿ ಹರಡಲಾಗುತ್ತಿದೆ.

ವೈರಲ್ ಪೋಸ್ಟ್‌ನಲ್ಲೇನಿದೆ?

ವೈರಲ್ ಆಗಿರುವ ಈ ಎಡಿಟೆಡ್ ಫೋಟೋದಲ್ಲಿ ಸೋನಂ ವಾಂಗ್‌ಚುಕ್ ಅವರ ಚಿತ್ರವಿದ್ದು, ‘ಅವರು ಉಪವಾಸ ಮಾಡುತ್ತಿದ್ದಾರೆ, ನಾವು ಸ್ಕ್ರಾಲ್ ಮಾಡುತ್ತಿದ್ದೇವೆ’ ಎಂಬ ವಾಕ್ಯವಿದೆ. ಜೊತೆಗೆ, ‘ನಾವು ಪ್ರಜಾಪ್ರಭುತ್ವದ ಕರಾಳ ದಿನಗಳಲ್ಲಿದ್ದೇವೆ. ಸೋತ ನಾಯಕನನ್ನು ವೈಭವೀಕರಿಸಲು ಎಷ್ಟು ಚಿತ್ರಗಳನ್ನು ಮಾಡಿದರೂ ಸತ್ಯ ಬದಲಾಗಲ್ಲ’ ಎಂದು ದೀಪಿಕಾ ಬರೆದುಕೊಂಡಿದ್ದಾರೆ ಎಂದು ಸುಳ್ಳು ಸುದ್ದಿ ಸೃಷ್ಟಿಸಲಾಗಿದೆ.

ಅಸಲಿ ಸತ್ಯ ಇಲ್ಲಿದೆ!

ನಿಜಾಂಶವೆಂದರೆ, ನಟಿ ದೀಪಿಕಾ ಪಡುಕೋಣೆ ತಮ್ಮ ಅಧಿಕೃತ ಖಾತೆಯಿಂದ ಇಂತಹ ಯಾವುದೇ ರಾಜಕೀಯ ಅಥವಾ ಸಾಮಾಜಿಕ ಪೋಸ್ಟ್‌ಗಳನ್ನು ಹಂಚಿಕೊಂಡಿಲ್ಲ. ಇಂಟರ್ನೆಟ್‌ನಲ್ಲಿ ಹರಿದಾಡುತ್ತಿರುವುದು ಸಂಪೂರ್ಣ ನಕಲಿ (Fake) ಸ್ಕ್ರೀನ್‌ಶಾಟ್ ಆಗಿದೆ. ಕಳೆದ ಆರು ತಿಂಗಳ ಅವಧಿಯಲ್ಲಿ ದೀಪಿಕಾ ಅವರ ಹೆಸರನ್ನು ಬಳಸಿ ಈ ರೀತಿ ಫೇಕ್ ಸ್ಕ್ರೀನ್‌ಶಾಟ್ ವೈರಲ್ ಮಾಡುತ್ತಿರುವುದು ಇದು ಎರಡನೇ ಬಾರಿಯಾಗಿದ್ದು, ಅಭಿಮಾನಿಗಳು ಹಾಗೂ ನೆಟ್ಟಿಗರು ಇಂತಹ ವದಂತಿಗಳನ್ನು ನಂಬಬಾರದು ಎಂದು ವಿನಂತಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !