November 15, 2026
Sunday, November 15, 2026
spot_img

ನಿಮ್ಮದೇ ಜಾಹೀರಾತು ಬ್ಯಾಗ್‌ಗೆ ಹಣ ವಸೂಲಿ ಏಕೆ? ಮದ್ಯದ ಮಳಿಗೆಗೆ ಗ್ರಾಹಕರ ಕೋರ್ಟ್ ಚಾಟಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮದ್ಯದ ಬಾಟಲಿಗಳನ್ನು ಮನೆಗೆ ತೆಗೆದುಕೊಂಡು ಹೋಗಲು ನೀಡಿದ ಕ್ಯಾರಿ ಬ್ಯಾಗ್, ಈಗ ಪ್ರತಿಷ್ಠಿತ ಮದ್ಯದ ಮಳಿಗೆಯೊಂದರ ನಶೆ ಇಳಿಸಿದೆ. ತಮ್ಮದೇ ಮಳಿಗೆಯ ಹೆಸರು ಮತ್ತು ಲೋಗೋ ಮುದ್ರಿತವಾಗಿದ್ದ ಕ್ಯಾರಿ ಬ್ಯಾಗ್‌ಗೆ ಗ್ರಾಹಕನೊಬ್ಬನಿಂದ 20 ರೂಪಾಯಿ ಹೆಚ್ಚುವರಿ ಹಣ ಪಡೆದಿದ್ದ ಮದ್ಯದ ಮಳಿಗೆಯನ್ನು ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ತಪ್ಪಿತಸ್ಥ ಎಂದು ತೀರ್ಪು ನೀಡಿದೆ.

ಘಟನೆಯ ಹಿನ್ನೆಲೆ ಏನು?

2025ರ ಜೂನ್ 3ರಂದು ಬಾಗಲಗುಂಟೆ ನಿವಾಸಿ ತೀರ್ಥೇಶ್ ಬಿ.ಎಸ್. (33) ಎಂಬುವವರು ಕಸ್ತೂರಬಾ ರಸ್ತೆಯಲ್ಲಿರುವ ಮದ್ಯದ ಮಳಿಗೆಯಲ್ಲಿ 2,170 ರೂಪಾಯಿ ಮೌಲ್ಯದ ಪಾನೀಯಗಳನ್ನು ಖರೀದಿಸಿದ್ದರು. ಗಾಜಿನ ಬಾಟಲಿಗಳು ಒಡೆಯುವ ಭಯವಿದ್ದ ಕಾರಣ, ಅವುಗಳನ್ನು ಸುರಕ್ಷಿತವಾಗಿ ಕೊಂಡೊಯ್ಯಲು ಕ್ಯಾರಿ ಬ್ಯಾಗ್ ಕೇಳಿದ್ದರು. ಆಗ ಮಳಿಗೆಯ ಸಿಬ್ಬಂದಿ, ತಮ್ಮದೇ ಬ್ರ್ಯಾಂಡ್ ಹೆಸರು, ಲೋಗೋ ಮತ್ತು ಜಾಹೀರಾತು ವಿವರಗಳಿದ್ದ ಚೀಲವನ್ನು ನೀಡಿ, ಅದಕ್ಕೆ ಪ್ರತ್ಯೇಕವಾಗಿ 20 ರೂಪಾಯಿ ಬಿಲ್ ಮಾಡಿದ್ದರು. ಅಂಗಡಿಯ ಪ್ರಚಾರದ ಚೀಲಕ್ಕೆ ನಾನೇಕೆ ಹಣ ನೀಡಬೇಕು ಎಂದು ತೀರ್ಥೇಶ್ ಪ್ರಶ್ನಿಸಿದರೂ ಸಿಬ್ಬಂದಿ ಕಿವಿಗೊಡಲಿಲ್ಲ. ಅನಿವಾರ್ಯವಾಗಿ ಹಣ ಪಾವತಿಸಿದ ತೀರ್ಥೇಶ್, ಜೂನ್ 17ರಂದು ಗ್ರಾಹಕ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಆಯೋಗವು ನೋಟಿಸ್ ನೀಡಿದರೂ ಮಳಿಗೆಯ ವ್ಯವಸ್ಥಾಪಕರು ವಿಚಾರಣೆಗೆ ಹಾಜರಾಗಲಿಲ್ಲ. ನಂತರ ಮಳಿಗೆಯ ಪರ ವಕೀಲರು ಲಿಖಿತ ವಾದ ಮಂಡಿಸಿ, “ಚೀಲದ ದರದ ಬಗ್ಗೆ ಅಂಗಡಿಯಲ್ಲಿ ಫಲಕ ಹಾಕಲಾಗಿದೆ, ಗ್ರಾಹಕರು ಕೇಳಿದಾಗ ಮಾತ್ರ ಹಣ ಪಡೆದು ನೀಡುತ್ತೇವೆ” ಎಂದು ಸಮರ್ಥಿಸಿಕೊಂಡಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ರಾಮಚಂದ್ರ ಎಂ.ಎಸ್. ಹಾಗೂ ಸದಸ್ಯರಾದ ನಂದಿನಿ ಎಚ್. ಕುಂಬಾರ್ ಮತ್ತು ಸವಿತಾ ಐರಾಣಿ ಅವರ ಪೀಠವು ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿತು. “ಗಾಜಿನ ಬಾಟಲಿಗಳನ್ನು ಮಾರಾಟ ಮಾಡುವ ವ್ಯಾಪಾರಿಗೆ, ಗ್ರಾಹಕರಿಗೆ ಅವುಗಳನ್ನು ಕೊಂಡೊಯ್ಯಲು ಚೀಲದ ಅಗತ್ಯವಿರುತ್ತದೆ ಎಂಬ ಸಾಮಾನ್ಯ ಜ್ಞಾನವಿರಬೇಕು. ಅಲ್ಲದೆ, ತನ್ನದೇ ಜಾಹೀರಾತಿಗೆ ಬಳಸುವ ಚೀಲಕ್ಕೆ ಗ್ರಾಹಕರಿಂದ ಹಣ ವಸೂಲಿ ಮಾಡುವುದು ‘ಅನ್ಯಾಯದ ವ್ಯಾಪಾರ ಪದ್ಧತಿ’ ಮತ್ತು ‘ಸೇವಾ ನ್ಯೂನತೆ’ಯಾಗಿದೆ” ಎಂದು ಪೀಠವು ತರಾಟೆಗೆ ತೆಗೆದುಕೊಂಡಿತು.

ಅಂತಿಮವಾಗಿ, ಗ್ರಾಹಕನಿಂದ ಪಡೆದ 20 ರೂಪಾಯಿಯನ್ನು ಮರಳಿಸುವಂತೆ, ಸೇವಾ ನ್ಯೂನತೆಗಾಗಿ 5,000 ರೂಪಾಯಿ ಪರಿಹಾರ ಹಾಗೂ ನ್ಯಾಯಾಲಯದ ಖರ್ಚಿಗಾಗಿ 3,000 ರೂಪಾಯಿ ಸೇರಿದಂತೆ ಒಟ್ಟು 8,020 ರೂಪಾಯಿಗಳನ್ನು ಪಾವತಿಸುವಂತೆ ಆಯೋಗವು ಮಳಿಗೆಗೆ ಆದೇಶಿಸಿದೆ.

Must Read