ಹೊಸದಿಗಂತ ಡಿಜಿಟಲ್ ಡೆಸ್ಕ್:
ಶ್ವೇತಭವನದಿಂದ ದೇಶವನ್ನುದ್ದೇಶಿಸಿ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾ ಕಮ್ಯುನಿಸ್ಟ್ ಸರ್ಕಾರವು ಅಮೆರಿಕದ ಚುನಾವಣಾ ವ್ಯವಸ್ಥೆಯನ್ನು ಗುರಿಯಾಗಿಸಿಕೊಂಡು ಇತಿಹಾಸದಲ್ಲೇ ಅತ್ಯಂತ ವಿನಾಶಕಾರಿ ಸೈಬರ್ ಹ್ಯಾಕಿಂಗ್ ನಡೆಸಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಚೀನಾವು ಬರೋಬ್ಬರಿ 22 ಕೋಟಿ (220 ಮಿಲಿಯನ್) ಅಮೆರಿಕನ್ ಮತದಾರರ ಅತ್ಯಂತ ಸೂಕ್ಷ್ಮ ಹಾಗೂ ರಹಸ್ಯ ಮಾಹಿತಿಗಳನ್ನು ಕಾನೂನುಬಾಹಿರವಾಗಿ ತನ್ನ ವಶಕ್ಕೆ ಪಡೆದುಕೊಂಡಿದೆ ಎಂದು ಅವರು ಪ್ರೈಮ್-ಟೈಮ್ ಭಾಷಣದಲ್ಲಿ ಬಹಿರಂಗಪಡಿಸಿದ್ದಾರೆ.
ಇತಿಹಾಸದ ಅತಿ ದೊಡ್ಡ ದತ್ತಾಂಶ ಹಗರಣ
ಟ್ರಂಪ್ ಅವರ ಪ್ರಕಾರ, ಈ ಬೃಹತ್ ಚುನಾವಣಾ ದತ್ತಾಂಶ ಕಳವು ಪ್ರಕ್ರಿಯೆಯು 2020 ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಅವಧಿಯಲ್ಲೇ ಆರಂಭವಾಗಿತ್ತು. ಮತದಾರರ ಹೆಸರು, ವಿಳಾಸ ಮತ್ತು ರಾಜಕೀಯ ಒಲವುಗಳನ್ನೊಳಗೊಂಡ ಈ ರಹಸ್ಯ ವರದಿಗಳ ವರ್ಗೀಕರಣವನ್ನು ಮುಕ್ತಗೊಳಿಸಲಾಗಿದ್ದು, ಶೀಘ್ರದಲ್ಲೇ ಜಗತ್ತಿನೆದುರು ಸಂಪೂರ್ಣ ಪುರಾವೆಗಳನ್ನು ಬಿಚ್ಚಿಡುವುದಾಗಿ ಅವರು ಎಚ್ಚರಿಸಿದ್ದಾರೆ.
ವ್ಯವಸ್ಥೆಯ ಒಳಗಿನ ಒಳಸಂಚಿನ ಆರೋಪ
ಚೀನಾ ದೇಶವು ಇಂತಹದೊಂದು ಮಹಾ ವಂಚನೆಯ ಮೂಲಕ ಅಮೆರಿಕದ ಸಾರ್ವಭೌಮತ್ವಕ್ಕೆ ಸವಾಲು ಹಾಕಿದೆ ಎಂದಿರುವ ಟ್ರಂಪ್, ಆಡಳಿತ ವ್ಯವಸ್ಥೆಯ ಒಳಗಿರುವ ಕೆಲವು ಪ್ರಭಾವಿ ವ್ಯಕ್ತಿಗಳು ಈ ಕೃತ್ಯವನ್ನು ಇಷ್ಟು ದಿನ ಜಗತ್ತಿಗೆ ತಿಳಿಯದಂತೆ ಮುಚ್ಚಿಟ್ಟಿದ್ದರು ಎಂದು ನೇರ ವಾಗ್ದಾಳಿ ನಡೆಸಿದ್ದಾರೆ. ಈ ಸೈಬರ್ ಕಾರ್ಯಾಚರಣೆಯು ಅಮೆರಿಕದ ಚುನಾವಣಾ ಭದ್ರತೆಗೆ ಎದುರಾಗಿರುವ ದೊಡ್ಡ ದುಸ್ವಪ್ನ ಎಂದು ಅವರು ಬಣ್ಣಿಸಿದ್ದಾರೆ.



