ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಜಿತ್ ಪವಾರ್ ಅವರ ಆಕಸ್ಮಿಕ ನಿಧನದ ನಂತರ ಆಡಳಿತಾರೂಢ ಎನ್‌ಸಿಪಿ ಪಕ್ಷದಲ್ಲಿ ಅಧಿಕಾರದ ಜಟಾಪಟಿ ತಾರಕಕ್ಕೇರಿದೆ. ಪ್ರಸ್ತುತ ಸುನೇತ್ರಾ ಪವಾರ್ ಮತ್ತು ಅವರ ಪುತ್ರ ಪಾರ್ಥ್ ಪವಾರ್ ನೇತೃತ್ವದ ಅಧಿಕೃತ ಬಣ ಪಕ್ಷದ ಚುಕ್ಕಾಣಿ ಹಿಡಿದಿದೆ. ಆದರೆ, ಯುವ ನಾಯಕ ಪಾರ್ಥ್ ಅವರ ಹೆಚ್ಚುತ್ತಿರುವ ಹಸ್ತಕ್ಷೇಪದ ವಿರುದ್ಧ ಹಿರಿಯ ಶಾಸಕರು ತೀವ್ರ ಅಸಮಾಧಾನಗೊಂಡಿದ್ದಾರೆ. ಇದೇ ಕಾರಣಕ್ಕೆ ಹಿರಿಯ ನಾಯಕರು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ನಿವಾಸದಲ್ಲಿ ಬ್ಯಾಕ್ ಟು ಬ್ಯಾಕ್ ಮೂರು ರಹಸ್ಯ ಸಭೆಗಳನ್ನು ನಡೆಸಿರುವುದು ತೀವ್ರ ಕುತೂಹಲ ಮೂಡಿಸಿದೆ.
ಶರದ್ ಪವಾರ್ ಬಣದತ್ತ ಶಾಸಕರ ಒಲವು?
ಮತ್ತೊಂದೆಡೆ, ಕಾಂಗ್ರೆಸ್ ನೇತೃತ್ವದ ‘ಇಂಡಿ’ (I.N.D.I.A) ಮೈತ್ರಿಕೂಟದಲ್ಲಿರುವ ಶರದ್ ಪವಾರ್ ಮತ್ತು ಸುಪ್ರಿಯಾ ಸುಳೆ ಬಣ ಮತ್ತಷ್ಟು ಬಲಗೊಳ್ಳುತ್ತಿದೆ. ಈ ಬಣದ ಹಿರಿಯ ನಾಯಕ ಜಯಂತ್ ಪಾಟೀಲ್ ಕೂಡ ಇತ್ತೀಚೆಗೆ ಸಿಎಂ ಫಡ್ನವೀಸ್ ಅವರನ್ನು ಭೇಟಿಯಾಗಿರುವುದು ವಿಲೀನ ಅಥವಾ ಪಕ್ಷಾಂತರದ ಹೊಸ ಮುನ್ಸೂಚನೆಯನ್ನು ನೀಡಿದೆ.
ಅಜಿತ್ ಪವಾರ್ ಅವರ ನಿಧನದ ಬಳಿಕ ಪಕ್ಷವನ್ನು ಒಟ್ಟಾಗಿ ಮುನ್ನಡೆಸುವ ಪ್ರಭಾವಿ ವರ್ಚಸ್ಸು ಸುನೇತ್ರಾ ಪವಾರ್ ಅವರಲ್ಲಿ ಕಾಣುತ್ತಿಲ್ಲ. ಹೀಗಾಗಿ, ತಮ್ಮ ರಾಜಕೀಯ ಭವಿಷ್ಯದ ಹಿತದೃಷ್ಟಿಯಿಂದ ಅಜಿತ್ ಪವಾರ್ ಬಣದ ಹಲವು ಶಾಸಕರು ಮರಳಿ ಹಿರಿಯ ಮುತ್ಸದ್ದಿ ಶರದ್ ಪವಾರ್ ಅವರ ಸಾರಥ್ಯವನ್ನು ಸೇರಲು ಉತ್ಸುಕರಾಗಿದ್ದಾರೆ. ಇದು ಮಹಾರಾಷ್ಟ್ರ ಮೈತ್ರಿ ಸರ್ಕಾರಕ್ಕೆ ನಡುಕ ಹುಟ್ಟಿಸಿದೆ.



