July 17, 2026
Friday, July 17, 2026
spot_img

ಖಡೇಬಜಾರ್‌ನಲ್ಲಿ ತಡರಾತ್ರಿ ಚಿನ್ನದ ಅಂಗಡಿ ದರೋಡೆಗೆ ಯತ್ನ; ವ್ಯಾಪಾರಿಗಳಲ್ಲಿ ಆತಂಕ

ಹೊಸದಿಗಂತ ವರದಿ ಬೆಳಗಾವಿ:

ನಗರದ ಪ್ರಮುಖ ವಾಣಿಜ್ಯ ಕೇಂದ್ರವಾದ ಖಡೇಬಜಾರ್ ಪ್ರದೇಶದಲ್ಲಿರುವ ಚಿನ್ನಾಭರಣ ಅಂಗಡಿಯೊಂದರಲ್ಲಿ ಗುರುವಾರ ನಿನ್ನೆ ತಡರಾತ್ರಿ ದರೋಡೆಗೆ ಯತ್ನ ನಡೆದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಈ ಘಟನೆಯು ಸ್ಥಳೀಯ ಉದ್ಯಮಿಗಳು ಹಾಗೂ ಸಾರ್ವಜನಿಕರಲ್ಲಿ ತೀವ್ರ ಆತಂಕವನ್ನು ಸೃಷ್ಟಿಸಿದೆ.

​ಮಧ್ಯರಾತ್ರಿ ಸುಮಾರು 3 ಗಂಟೆಯ ವೇಳೆಗೆ ವಾಹನವೊಂದರಲ್ಲಿ ಆಗಮಿಸಿದ ದುಷ್ಕರ್ಮಿಗಳ ತಂಡವು ಚಿನ್ನದ ಅಂಗಡಿಯ ಬೀಗವನ್ನು ಒಡೆದು ಒಳನುಗ್ಗಲು ಪ್ರಯತ್ನಿಸಿದೆ. ಆದರೆ ಅವರ ಯತ್ನ ವಿಫಲಗೊಂಡಿದೆ. ಇದಾದ ಬಳಿಕ, ಅಂದರೆ ಸುಮಾರು ಎರಡು ಗಂಟೆಗಳ ನಂತರ ಮತ್ತೊಂದು ವಾಹನದಲ್ಲಿ ಬಂದ ಅಪರಿಚಿತ ವ್ಯಕ್ತಿಯೊಬ್ಬ ಅಂಗಡಿಯ ಮುಂಭಾಗದಲ್ಲಿದ್ದ ಕೆಲವು ವಸ್ತುಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.

​ಪೊಲೀಸರಿಂದ ಸಿಸಿಟಿವಿ ಪರಿಶೀಲನೆ:
​ಕಳ್ಳತನದ ಯತ್ನ ನಡೆದಿರುವ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಖಡೇಬಜಾರ್ ಠಾಣೆಯ ಪೊಲೀಸರು ಸೂಕ್ಷ್ಮ ಪರಿಶೀಲನೆ ನಡೆಸಿದ್ದಾರೆ. ಅಂಗಡಿಯಲ್ಲಿ ಹಾಗೂ ಸುತ್ತಮುತ್ತ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ದುಷ್ಕರ್ಮಿಗಳ ಸುಳಿವಿಗಾಗಿ ತನಿಖೆ ಚುರುಕುಗೊಳಿಸಿದ್ದಾರೆ. ಸದ್ಯ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗಾಗಿ ಜಾಲ ಬೀಸಿದ್ದಾರೆ.

​ಸ್ಥಳೀಯರ ಆಗ್ರಹ:
ಈ ಘಟನೆಯಿಂದ ತೀವ್ರ ಭಯಭೀತರಾಗಿರುವ ಖಡೇಬಜಾರ್ ವ್ಯಾಪಾರಿಗಳು, ತಮ್ಮ ಸುರಕ್ಷತೆಯ ದೃಷ್ಟಿಯಿಂದ ರಾತ್ರಿ ವೇಳೆಯ ಪೊಲೀಸ್ ಗಸ್ತು ವ್ಯವಸ್ಥೆಯನ್ನು ಮತ್ತಷ್ಟು ಹೆಚ್ಚಿಸಬೇಕು ಮತ್ತು ವ್ಯಾಪಾರ ಪ್ರದೇಶಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಬೇಕು ಎಂದು ಪೊಲೀಸ್ ಇಲಾಖೆಗೆ ಆಗ್ರಹಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !