July 17, 2026
Friday, July 17, 2026
spot_img

ಬೆಳಗಾವಿ: ಕೊನೆಗೂ ಗೆದ್ದ ರೈತರ ಛಲ, 4 ದಿನಗಳ ಅಹೋರಾತ್ರಿ ಧರಣಿ ಹಿಂಪಡೆದ ಮಾಸ್ತಿಹೊಳಿ ಗ್ರಾಮಸ್ಥರು

ಹೊಸದಿಗಂತ ವರದಿ ಬೆಳಗಾವಿ:

ಬೆಳಗಾವಿ: ಇಲ್ಲಿನ ಕರ್ನಾಟಕ ನೀರಾವರಿ ನಿಗಮ ನಿಯಮಿತದ ಬೆಳಗಾವಿ ಉತ್ತರ ವಲಯ ಕಚೇರಿ ಎದುರು ನಾಲ್ಕು ದಿನಗಳಿಂದ ನಡೆಸುತ್ತಿದ್ದ ಹುಕ್ಕೇರಿ ತಾಲೂಕಿನ ಮಾಸ್ತಿಹೊಳಿ ಗ್ರಾಮದ ರೈತರು ನಡೆಸುತ್ತಿದ್ದ ಅಹೋರಾತ್ರಿ ಧರಣಿ ಶುಕ್ರವಾರ ನೀರಾವರಿ ಇಲಾಖೆಯ ಅಧಿಕಾರಿಗಳು ಭರವಸೆ ನೀಡುವುದರೊಂದಿಗೆ ಅಂತ್ಯಕಂಡಿದೆ.

ಹಿಡಕಲ್ ಜಲಾಶಯ ಯೋಜನೆಯಿಂದ ಭೂಮಿ ಕಳೆದುಕೊಂಡ 24 ಗ್ರಾಮಗಳ ಸಂತ್ರಸ್ತ ರೈತರು ನ್ಯಾಯಯುತ ಪರಿಹಾರ ಹಾಗೂ ದಾಖಲೆಗಳಲ್ಲಿನ ಲೋಪದೋಷಗಳನ್ನು ಸರಿಪಡಿಸುವಂತೆ ಆಗ್ರಹಿಸಿ ಜಾನುವಾರುಗಳೊಂದಿಗೆ ಕರ್ನಾಟಕ ನೀರಾವರಿ ನಿಗಮದ ಬೆಳಗಾವಿ ಉತ್ತರ ವಲಯ ಕಚೇರಿ ಆವರಣದಲ್ಲಿ ಕಳೆದ ನಾಲ್ಕು ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದರು. ಶುಕ್ರವಾರ ನೀರಾವರಿ ಇಲಾಖೆಯ ಅಧಿಕಾರಿಗಳು ರೈತರೊಂದಿಗೆ ರೈತ ಮುಖಂಡ ಬಾಳೇಶ ಮಾವನೂರೆ ನೇತೃತ್ವದಲ್ಲಿ ನಡೆದ ಮಾತುಕತೆಯ ಬಳಿಕ ಧರಣಿ ಅಂತ್ಯಗೊಂಡಿತು. ಅಲ್ಲದೇ ದಾಖಲೆಗಳಲ್ಲಿನ ಅಗತ್ಯ ತಿದ್ದುಪಡಿಗಳನ್ನು ಮಾಡಿ ರೈತರಿಗೆ ಹಸ್ತಾಂತರಿಸಿದರು. ಜತೆಗೆ ಉಳಿದ ಬೇಡಿಕೆಗಳನ್ನು ಹಂತ ಹಂತವಾಗಿ ಪರಿಹರಿಸುವ ಭರವಸೆ ನೀಡಿದರು. ಅಧಿಕಾರಿಗಳ ಭರವಸೆಯನ್ನು ಸ್ವೀಕರಿಸಿದ ರೈತರು ತಮ್ಮ ಅಹೋರಾತ್ರಿ ಧರಣಿಯನ್ನು ಹಿಂಪಡೆದು ಪ್ರತಿಭಟನೆಯನ್ನು ಅಂತ್ಯಗೊಳಿಸಿದರು.

ಈ ವೇಳೆ ರೈತ ಮುಖಂಡ ಬಾಳೇಶ ಮಾವನೂರೆ ಮಾತನಾಡಿ, ಹಿಡಕಲ್ ಜಲಾಶಯ ಯೋಜನೆಯಿಂದ ಸಂತ್ರಸ್ತರಾದ 24 ಗ್ರಾಮಗಳ ರೈತರ ಸುದೀರ್ಘ ಹೋರಾಟಕ್ಕೆ ಕೊನೆಗೂ ಪ್ರಾಥಮಿಕ ಯಶಸ್ಸು ಸಿಕ್ಕಿದೆ.  ರೈತರ ನಿರಂತರ ಧರಣಿ ಸತ್ಯಾಗ್ರಹಕ್ಕೆ ಅಧಿಕಾರಿಗಳು ಮಣಿದು ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು ಅಂತಿಮವಾಗಿ ದಾಖಲೆಗಳನ್ನು ಪರಿಶೀಲಿಸಿ, ತಿದ್ದುಪಡಿ ಮಾಡಿದ ಪ್ರಾಥಮಿಕ ವರದಿಯನ್ನು ರೈತರಿಗೆ ಹಸ್ತಾಂತರಿಸಿದ್ದಾರೆ ಎಂದರು.

ದಾಖಲೆಗಳ ತಿದ್ದುಪಡಿಗಾಗಿ ನಾವು ನಿರಂತರವಾಗಿ ಒತ್ತಡ ಹೇರಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ವರದಿ ನೀಡಿದ್ದಾರೆ. ಈ ಹೋರಾಟಕ್ಕೆ ಬೆಂಬಲವಾಗಿ ನಿಂತ ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಮಲಗೌಡ ಪಾಟೀಲ್ ಅವರಿಗೆ ಸಮಸ್ತ ರೈತರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದರು.

ಬಿಡದಿ ಮಾದರಿ ಪರಿಹಾರಕ್ಕೆ ಬೇಡಿಕೆ:

 ಜಲಾಶಯದ ಹಿನ್ನೀರಿನಲ್ಲಿ ಸುಮಾರು 400 ಎಕರೆ ಭೂಮಿ ಮುಳುಗಡೆಯಾಗಿದ್ದರಿಂದ ರೈತರ ಜೀವನ ಅತಂತ್ರವಾಗಿತ್ತು. ಇದೀಗ ಕರ್ನಾಟಕ ನೀರಾವರಿ ನಿಗಮದ ಬೆಳಗಾವಿ ಉತ್ತರ ವಲಯದ ಅಧಿಕಾರಿಗಳು ಸಿದ್ಧಪಡಿಸಿರುವ ಅಧಿಕೃತ ವರದಿಯನ್ನೇ ಆಧಾರವಾಗಿಟ್ಟುಕೊಂಡು, ಸರ್ಕಾರ ನಮಗೂ ಬೆಂಗಳೂರಿನ ‘ಬಿಡದಿ ಮಾದರಿ’ಯಲ್ಲೇ ಪ್ರತಿ ಎಕರೆಗೆ 2.5 ಕೋಟಿ ರೂ. ಪರಿಹಾರ ಧನ ನೀಡಬೇಕು ಎಂದು ರೈತರು ಸರ್ಕಾರವನ್ನು ಒತ್ತಾಯಿಸಿದರು.

ಸತೀಶ್‌ ಜಾರಕಿಹೊಳಿ ಪರ ಘೋಷಣೆ ಕೂಗಿದ ರೈತರು: 

ನೀರಾವರಿ ಕಚೇರಿ ಆವರಣದಲ್ಲಿ ನಡೆಯುತ್ತಿದ್ದ ಧರಣಿ ಅಂತ್ಯಗೊಂಡ ಬಳಿಕ ಸಂತ್ರಸ್ತ ರೈತರು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿ ಅವರ ಪರವಾಗಿ ಘೋಷಣೆಗಳನ್ನು ಕೂಗಿದರು. ತಮ್ಮ ಸಮಸ್ಯೆ ಪರಿಹಾರಕ್ಕೆ ಸಚಿವರು ವಿಶೇಷ ಆಸಕ್ತಿ ವಹಿಸಿ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ನ್ಯಾಯ ದೊರಕುವಂತೆ ಕ್ರಮ ಕೈಗೊಂಡಿದ್ದಾರೆ ಎಂದು ರೈತರು  ಸಚಿವ ಸತೀಶ್‌ ಜಾರಕಿಹೊಳಿ ಅವರಿಗೆ ಜಯವಾಗಲಿ ಎನ್ನುವ ಮೂಲಕ ಘೋಷಣೆಗಳನ್ನು ಕೂಗಿ ಕೃತಜ್ಞತೆ ವ್ಯಕ್ತಪಡಿಸಿದರು.

ಇದನ್ನೂ ಓದಿ:

ಜೈಕಾರ್ ಹಾಕಿ ಸಂಭ್ರಮಿಸಿದ ರೈತರು:

 ದಶಕಗಳ ಬೇಡಿಕೆ ಹೋರಾಡಿ ಧಕ್ಕಿಸಿಕೊಂಡ ರೈತರು ಇಂದು ನೀರಾವರಿ ಕಚೇರಿ ಎದುರು ಜೈಕಾರ್‌ ಹಾಕುವ ಮೂಲಕ ಸಂಭ್ರಮಿಸಿದರು. ಇದು ರೈತರ ಹೋರಾಟಕ್ಕೆ ಸಿಕ್ಕ ಜಯ ಎನ್ನುತ್ತ ತಮ್ಮ ಹೆಗಲ ಮೇಲಿದ್ದ ಹಸಿರು ಶಾಲು ತೂರಿ ಸಂತ್ರಸ್ತ ಸಂಭ್ರಮಿಸಿದರು. ಒಟ್ಟಾರೆ  24 ಗ್ರಾಮಗಳ ಸಂತ್ರಸ್ತ ರೈತರು  ತಮ್ಮ ಊರು ಹಾಗೂ ಮನೆಗಳನ್ನು ಬಿಟ್ಟು ನೀರಾವರಿ ಕಚೇರಿ ಆವರಣದಲ್ಲಿ ಅಹೋರಾತ್ರಿ ಧರಣಿ ನಡೆಸುವ ಮೂಲಕ ತಮ್ಮ ಬೇಡಿಕೆಯನ್ನು ಈಡೇರಸಿಕೊಂಡಿದ್ದು, ಈ ಅಹೋರಾತ್ರಿ ಧರಣಿಗೆ ಸದ್ಯ ತೆರೆ ಬಿದ್ದತಾಂಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !